Bengaluru: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಡಿವಾಳ ಸಮಾಜವನ್ನು ಸಂಘಟಿಸಲು ಕುಕ್ಕರ್ ಮತ್ತು ಇಸ್ತ್ರಿಪೆಟ್ಟಿಗೆಗಳನ್ನು ಹಂಚಿರುವುದಾಗಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ವಿರುದ್ದ ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡಿರುವ ಬಿಜೆಪಿ, ಈ ಕುರಿತು ಸಮಗ್ರ ತನಿಖೆ ನಡೆಬೇಕೆಂದು ಒತ್ತಾಯಿಸಿದೆ.
ಸಿದ್ದರಾಮಯ್ಯನವರು (Siddaramaiah) ಚುನಾವಣೆಯಲ್ಲಿ ಗೆಲ್ಲಲು ಕುಕ್ಕರ್ ಹಂಚಿಕೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಜೆಡಿಎಸ್ (JDS) ನಾಯಕ ಎಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು, ಮತದಾರರಿಗೆ ಸಲ್ಲದ ಆಸೆ, ಆಮಿಷ ಒಡ್ಡಿ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ನಾನು ಪದೇಪದೆ ಹೇಳಿದ್ದೆ. ಗಿಫ್ಟ್ ಕೂಪನ್, ತವಾ, ಕುಕ್ಕರ್ (Kukkar), ಇಸ್ತ್ರಿಪೆಟ್ಟಿಗೆ, ಸೀರೆ ಕೊಟ್ಟ ಕಾಂಗ್ರೆಸ್ ಪಕ್ಷದ ‘ಅಸಲಿ ಹಸ್ತ’ದ ಹಕೀಕತ್ತು ಹೀಗಿದೆ ನೋಡಿ.
ಸ್ವತಃ ರಾಜ್ಯದ ಘನತವೇತ್ತ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸುಪುತ್ರನೇ ರಾಜ್ಯಕ್ಕೆ ಸತ್ಯದ ಸಾಕ್ಷಾತ್ಕಾರ ಮಾಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಉಳಿದ ಕ್ಷೇತ್ರಗಳ ಕಥೆ ಹಾಗಿರಲಿ, ಕರ್ನಾಟಕದ (Karnataka) ಮುಖ್ಯಮಂತ್ರಿಗಳ ಸ್ವಕ್ಷೇತ್ರ ವರುಣಾದಲ್ಲಿಯೇ ಜಾತಿ ಸಮಾವೇಶ ನಡೆಸಿ ಕುಕ್ಕರ್, ಇಸ್ತ್ರಿಪೆಟ್ಟಿಗೆಗಳ ಭರ್ಜರಿ ಸಮಾರಾಧನೆ ನಡೆದಿದೆ. ಸಮಾಜವಾದಿ ಮುಖ್ಯಮಂತ್ರಿ ಮಹೋದಯರ ಹಾದಿಯಲ್ಲೇ ನಡೆದಿರುವ ಇಡೀ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಗಳು
ಅದೇ ವಾಮಮಾರ್ಗದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಶ್ರೀ ಕೆಂಗಲ್ ಹನುಮಂತಯ್ಯ (Shree Kengal Hanumanthaiah) ಅವರು ಕಟ್ಟಿದ ಕನ್ನಡಿಗರ ಪ್ರಜಾಸತ್ತೆಯ ಮಹಾದೇಗುಲ ವಿಧಾನಸೌಧದ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ. ರಾಮನಗರ (Ramanagar), ಮಾಗಡಿ ಸೇರಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗಿಫ್ಟ್ ಕೂಪನ್, ಗ್ಯಾರಂಟಿ ಕೂಪನ್ (Guarantee Coupon) ಹಂಚಿಯೇ ಗೆದ್ದಿದ್ದಾರೆ. ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಸಹಿ ಹಾಕಿದ ಅಧಿಕೃತ ಅಮಿಷಗಳ 5 ಗ್ಯಾರಂಟಿ ಕೂಪನ್ ಗಳನ್ನು ಮನೆಮನೆಗೂ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ.
ಇದು ಸ್ವಾತಂತ್ರ್ಯ ಭಾರತ ಕಂಡ, ಅದೂ ಅಮೃತಕಾಲದಲ್ಲಿ ನಡೆದಿರುವ ಅತಿದೊಡ್ಡ ಚುನಾವಣಾ ಅಕ್ರಮ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಹೆಗ್ಗಳಿಕೆಯ ಕಗ್ಗೊಲೆ. ಕೇಂದ್ರ ಚುನಾವಣಾ ಆಯೋಗ ಈ ಚುನಾವಣಾ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕು. ಖಡಕ್ ತನಿಖೆ ನಡೆಸಿ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹೊರ ಹಾಕಲೇಬೇಕು ಎಂದು ಹೇಳಿದ್ದಾರೆ.