Bengaluru: ಇನ್ನೇನು ಮೂರು ದಿನಗಳಲ್ಲಿ ಆರಂಭವಾಗ ಬೇಕಿದ್ದ ಬಿಜೆಪಿ ಮತ್ತು ಜೆಡಿಎಸ್ (JDS) ಜಂಟಿಯಾಗಿ ಆರಂಭಿಸಲು ಬಯಸಿದ್ದ ಉದ್ದೇಶಿಸಿರುವ ಬೆಂಗಳೂರು – ಮೈಸೂರು ಪಾದಯಾತ್ರೆಗೆ ಆರಂಭಿಕ ವಿಘ್ನ ಎದುರಾಗಿದೆ. ರಾಜ್ಯದೆಲ್ಲಡೆ ಅತಿವೃಷ್ಟಿಯ ಹಿನ್ನಲೆಯಲ್ಲಿ ಪಾದಯಾತ್ರೆಯನ್ನು ಮುಂದೂಡಲು ಜೆಡಿಎಸ್ ಮನವಿ ಮಾಡಿದೆ. ಜನರ ನೆಮ್ಮದಿ ಕಸಿದಿದ್ದ ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದ ಆಳ ಅಗಲವನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ ಮೈಸೂರು ಪಾದಯಾತ್ರೆ ನಡೆಸಲು ಬಿಜೆಪಿ ನಾಯಕರು ಮುಂದಾಗಿದ್ದರು.
ಹಾಗಾಗಿ ರಾಜ್ಯದಲ್ಲಿ ಮೈತ್ರಿ ಇರುವ ಕಾರಣ ಜೆಡಿಎಸ್ ನಾಯಕರು ಒಲ್ಲದ ಮನಸ್ಸಿನಿಂದ ಸಾಥ್ ನೀಡುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಈಗ, ಜೆಡಿಎಸ್ ಹಿರಿಯ ನಾಯಕ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ (G T Devegowda) ಅವರು ಪಾದಯಾತ್ರೆಯನ್ನು ಸದ್ಯದ ಮಟ್ಟಿಗೆ ಮುಂದೂಡುವುದು ಒಳ್ಳೆಯದು ಎಂದು ಅಭಿಪ್ರಾಯವನ್ನು ತಿಳಿಸಿದ್ದಾರೆ. ಅಷ್ಟಕ್ಕೂ ಮೂಲ ಕಾರಣ ಏನೆಂದರೆ ಮುಡಾ ಫಲಾನುಭವಿಗಳ ಪಟ್ಟಿಯಲ್ಲಿ ಜೆಡಿಎಸ್ ನಾಯಕರ ಹೆಸರು ಇರುವುದರಿಂದ, ಪಾದಯಾತ್ರೆಯಲ್ಲಿ ಮುಜುಗರ ಎದುರಾಗಬಹುದು ಎಂದು ಹೇಳಲಾಗುತ್ತಿದೆ.
ಇನ್ನು ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್, ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣವನ್ನು ಮುಂದಿಟ್ಟುಕೊಂಡು, ಸರ್ಕಾರವನ್ನು ಟೀಕಿಸಿದ್ದರು. ಇದರ ಬೆನ್ನಲ್ಲೇ, ಸರ್ಕಾರ ಮುಡಾ ನಿವೇಶನದ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಈ ಪಟ್ಟಿಯಲ್ಲಿ ದೇವೇಗೌಡರ ಕುಟುಂಬ, ಜೆಡಿಎಸ್ ನಾಯಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ (Sa.Ra Mahesh) ಮುಂತಾದವರು ಹೆಸರೂ ಇದ್ದವು. ಇದರಿಂದಾಗಿ, ಪಾದಯಾತ್ರೆಯಲ್ಲಿ ಜೆಡಿಎಸ್ ಪಾಲ್ಗೊಳ್ಳುವುದು ಬೇಡ ಎನ್ನುವ ಒತ್ತಡ, ಜೆಡಿಎಸ್ ವಲಯದಲ್ಲಿದೆ.
ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D Kumaraswamy) ಅವರನ್ನು ನಿಗದಿಯಾದ ಸ್ಥಳಗಳಲ್ಲಿ ಬಂದು ಭಾಷಣ ಮಾಡಿ ಹೋಗುವಂತೆ ನಮ್ಮ ಪಾದಯಾತ್ರೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಈ ಕುರಿತಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಏನನ್ನೂ ಪ್ರತಿಕ್ರಿಯೆ ನೀಡಿಲ್ಲ . ಹಾಗಾಗಿ ಜೆಡಿಎಸ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದು ಸದ್ಯದ ಮಟ್ಟಿಗೆ ಅನಿಶ್ಚಿತತೆಯಲ್ಲಿದೆ ಎಂದು ಹೇಳಲಾಗುತ್ತಿದೆ.