ಪಾಟ್ನಾ : 2024ರ ಲೋಕಸಭೆ ಚುನಾವಣೆ(Loksabha Election) ಮತ್ತು 2025ರ ಬಿಹಾರ(Bihar) ವಿಧಾನಸಭೆ ಚುನಾವಣೆಯಲ್ಲಿ(Vidhansabha Election) ಜೆಡಿಯು(JDU) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಬಿಜೆಪಿ(BJP) ಘೋಷಿಸಿದೆ. ಈ ಮೂಲಕ ಈಗಿನಿಂದಲೇ ಬಿಹಾರದಲ್ಲಿ ಮೈತ್ರಿಕೂಟವನ್ನು ರಚನೆ ಮಾಡುವ ಮತ್ತು ಇನ್ನಷ್ಟು ಸಣ್ಣ ಪಕ್ಷಗಳನ್ನು ಸೆಳೆಯುವ ತಂತ್ರವನ್ನು ಬಿಜೆಪಿ ಪ್ರಯೋಗಿಸಿದೆ.
ಭಾರತೀಯ ಜನತಾ ಪಕ್ಷ, ತನ್ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಮುಕ್ತಾಯದ ನಂತರ, 2024 ರ ಲೋಕಸಭೆ ಚುನಾವಣೆ ಮತ್ತು 2025ರ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್(Arun Singh) ಅವರು ಪಾಟ್ನಾದಲ್ಲಿ(Patna) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಜೆಡಿಯು ಜೊತೆ ಯಾವುದೇ ರೀತಿಯ ಬಿರುಕು ಇದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದರು.
ಜೆಡಿಯು ಜೊತೆ ಯಾವುದೇ ಹಗ್ಗ-ಜಗ್ಗಾಟ ನಡೆಯುತ್ತಿಲ್ಲ ಮತ್ತು ಬಿಜೆಪಿ ಯಾವಾಗಲೂ ಸಮ್ಮಿಶ್ರ ಧರ್ಮವನ್ನು ಅನುಸರಿಸುತ್ತಿದೆ. ನಾವು 2024 ಅಥವಾ 2025ರ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಅರುಣ್ ಸಿಂಗ್ ಹೇಳಿದರು. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮಾತನಾಡಿ, ಕೇಸರಿ ಪಕ್ಷವು ಜೆಡಿಯು ಜೊತೆ ಮೈತ್ರಿ ಮಾಡಿಕೊಂಡು ಮುಂದಿನ ಎಲ್ಲಾ ಚುನಾವಣೆಗಳನ್ನು ಎದುರಿಸಲಿದೆ. 2024 ಲೋಕಸಭಾ ಮತ್ತು 2025ರ ವಿಧಾನಸಭಾ ಚುನಾವಣೆಯಲ್ಲಿ ಮಾತ್ರವಲ್ಲ, ಅದರ ನಂತರವೂ ಸಹ ನಾವು ಜೆಡಿಯುನೊಂದಿಗೆ ಇರುತ್ತೇವೆ ಎಂದು ಹೇಳಿದರು.
ಇನ್ನು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವಿನ ಸಂಬಂಧ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿದ್ದವು. ಇದೀಗ ಬಿಜೆಪಿ ಮಾಡಿರುವ ಈ ಘೋಷಣೆ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಎಡೆಮಾಡಿಕೊಟ್ಟಿದೆ.