ಹೈದ್ರಾಬಾದ್ : ತೆಲಂಗಾಣದ(Telangana) ಬಿಜೆಪಿ ಶಾಸಕ(BJP MLA) ರಾಜಾಸಿಂಗ್ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕುರಿತು ನೀಡಿರುವ ಹೇಳಿಕೆ ಖಂಡಿಸಿ, ಹೈದ್ರಾಬಾದ್ನಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ಕೂಡಲೇ ಶಾಸಕ ರಾಜಾಸಿಂಗ್ ಅವರನ್ನು ಬಂಧಿಸಬೇಕೆಂದು ಪ್ರತಿಭಟನಾಕಾರರು(Protestors) ಆಗ್ರಹಿಸಿದ್ದಾರೆ.

ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಶಾಸಕ ರಾಜಾಸಿಂಗ್ ಅವರ ವಿರುದ್ಧ ಹೈದ್ರಾಬಾದ್ ಪೊಲೀಸರು(Hyderabad Police) ಪ್ರಕರಣ ದಾಖಲಿಸಿದ್ದಾರೆ. ಇನ್ನು ಸೋಮವಾರ ರಾತ್ರಿ ಹೈದರಾಬಾದ್ನಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್,
ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಪ್ರತಿಭಟನೆಗಳು ನಡೆದಿದ್ದು, ರಾಜಾಸಿಂಗ್ಅವರನ್ನು ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ. ಶಾಸಕ ರಾಜಾಸಿಂಗ್ ಅವರನ್ನು ಬಂಧಿಸಬೇಕೆಂದು ನಗರ ಪೊಲೀಸ್ ಕಮಿಷನರ್ ಸಿ.ವಿ.ಆನಂದ ಅವರ ಕಚೇರಿ ಎದುರು ಹಾಗೂ ಹೈದ್ರಾಬಾದ್ ನಗರದ ಅನೇಕ ಕಡೆ ಪ್ರತಿಭಟನೆಗಳು ನಡೆದಿವೆ.
ಬಿಜೆಪಿ ಶಾಸಕ ರಾಜಾಸಿಂಗ್ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರನ್ನು ತಕ್ಷಣ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇನ್ನು ಹೈದ್ರಾಬಾದ್ನ ಬಶೀರ್ ಬಾಗ್ನಲ್ಲಿರುವ ಕಮಿಷನರ್ ಕಚೇರಿಯ ಎದುರು ದಾಂಧಲೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಕಳೆದ ವಾರ ಹೈದರಾಬಾದ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಹಾಸ್ಯನಟ ಮುನಾವರ್ ಫರುಕಿ ವಿರುದ್ಧ ಬಿಜೆಪಿ ಶಾಸಕ ರಾಜಾಸಿಂಗ್ ವಿಡಿಯೋ ಬಿಡುಗಡೆ ಮಾಡಿ, ಹಾಸ್ಯದ ಹೆಸರಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಹೇಳನ ಮಾಡುವ ನಿಮ್ಮ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿ,

ಕಾರ್ಯಕ್ರಮ ನಡೆಸಿದರೆ ಸೆಟ್ ಅನ್ನು ಸುಟ್ಟುಹಾಕುವುದಾಗಿ ಹೇಳಿದ್ದರು. ಇದೇ ವೇಳೆ ಶಾಸಕ ರಾಜಾಸಿಂಗ್ ಅವರು ವಿಡಿಯೋದಲ್ಲಿ ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನೂ ನೀಡಿದ್ದಾರೆ ಎನ್ನಲಾಗಿದೆ.