ಬೆಂಗಳೂರು, ಡಿ. 05: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದ್ದು, ಅವರು ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ಆದೇಶಿಸಿದೆ.
ಇದರಿಂದ ಅಸಮಾಧಾನಗೊಂಡ ವಿಶ್ವನಾಥ್, ಬಿಜೆಪಿ ನಾಯಕರ ವಿರುದ್ಧ ಗರಂ ಆಗಿದ್ದು, ಹುಣಸೂರಿನಲ್ಲಿ ನಾನು ಸೋಲನುಭವಿಸಲು ಸಿ. ಪಿ ಯೋಗೇಶ್ವರ್ ಅವರೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯೋಗೇಶ್ವರ್ ಅವರನ್ನು ನೂರಕ್ಕೆ ನೂರು ಸಚಿವರನ್ನಾಗಿ ಮಾಡುವುದಾಗಿ ಹೇಳಿದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್ ತನ್ನ ಇಂಗಿತವನ್ನು ವ್ಯಕ್ತಪಡಿಸಿದರು. ಹುಣಸೂರಿನಲ್ಲಿ ನನ್ನ ಸೋಲಿಗೆ ನೇರ ಕಾರಣ ಸಿ. ಪಿ ಯೋಗೇಶ್ವರ್. ನನಗೆ ಟಿಕೇಟ್ ಕೊಡದೇ ಇರುವುದಕ್ಕೂ ಮುಂಚಿತವಾಗಿ ನಾನೇ ಕ್ಯಾಂಡಿಡೇಟ್ ಅಂತ ಬಿಂಬಿಸಿ ಸೀರೆ ಹಂಚಿ ಡ್ಯಾಮೇಜ್ ಮಾಡಿದ್ದರು. ಅದಾದ ಬಳಿಕ ಅಭ್ಯರ್ಥಿ ಆದ ,ಮೇಲೆ ಪಕ್ಷದಿಂದ ಚುನಾವಣೆಗೆ ಸಂತ ನನಗೆ ಬಂದಂತಹ ದೊಡ್ಡ ಮೊತ್ತದ ಹಣ ನನಗೆ ತಲುಪಲಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.
ನನಗೆ ಅಂತ ಬಂದ ಹಣವನ್ನು ಯೋಗೇಶ್ವರ್ ಹಾಗೂ ಸಂತೋಷ್ ಲಪಟಾಯಿಸಿದರು. ನನ್ನ ಸೋಲಿಗೆ ಇದು ಕೂಡ ಒಂದು ಕಾರಣ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಪಕ್ಷದ ಅಧ್ಯಕ್ಷರಿಗೂ ದೂರು ನೀಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಈ ವಿಚಾರದಿಂದ ನನಗೆ ತುಂಬಾನೇ ಬೇಸರವಾಗಿದೆ ಎಂದು ವಿಶ್ವನಾಥ್ ಅಸಮಾಧಾನ ಹೊರಹಾಕಿದರು.