‘ಜೆಡಿಎಸ್‍ನ ಭದ್ರಕೋಟೆ’ ಎಂದೇ ಕರೆಸಿಕೊಳ್ಳುವ ಸಕ್ಕರೆನಾಡು ಮಂಡ್ಯದಲ್ಲಿ(Mandya) ಕಮಲ ಅರಳಿಸಲು ಬಿಜೆಪಿ(BJP) ಭರ್ಜರಿ ರಣತಂತ್ರ ಹೆಣೆಯುತ್ತಿದೆ.

2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ(Vidhansabha Election) ಮಂಡ್ಯ ಜಿಲ್ಲೆಯ ಕೆಲ ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಈಗಾಗಲೇ ತಾಲೀಮು ಪ್ರಾರಂಭಿಸಿದೆ. ಇಷ್ಟು ದಿನ ಮಂಡ್ಯದ ಕೆಲ ಕ್ಷೇತ್ರಗಳಲ್ಲಿ ಹೆಸರಿಗೆ ಮಾತ್ರ ಅಭ್ಯರ್ಥಿಯನ್ನು ಘೋಷಿಸಿ ಸುಮ್ಮನಾಗುತ್ತಿದ್ದ ಬಿಜೆಪಿ ಈ ಬಾರಿ ಶತಾಯಗತಾಯ ದಳಪತಿಗಳ ಕೋಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ ಮಂಡ್ಯದಲ್ಲಿ ಬಿಜೆಪಿಯನ್ನು ಕಟ್ಟುವ ಹೊಣೆಗಾರಿಕೆಯನ್ನು ಸಿ.ಪಿ ಯೋಗೇಶ್ವರ್‍ಗೆ ನೀಡಲಾಗಿದೆ. ಸಿ.ಪಿ ಯೋಗೇಶ್ವರ್ ಈಗಾಗಲೇ ಮಂಡ್ಯ ಜಿಲ್ಲೆಯ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಮಂಡ್ಯ ಜಿಲ್ಲೆಯ ಹೋಬಳಿಗಳಲ್ಲಿ ಬಿಜೆಪಿ ಸಣ್ಣ ಸಮಾವೇಶಗಳನ್ನು ನಡೆಸಿ, ಗ್ರಾಮೀಣ ಮಟ್ಟದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ತನ್ನತ್ತ ಸೆಳೆದು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಬಿಜೆಪಿಯ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅನೇಕ ಸಭೆ ಮತ್ತು ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಇನ್ನು ಈ ಹಿಂದೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಭರ್ಜರಿ ಗೆಲುವು ಸಾಧಿಸಿದ್ದರು. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಆಘಾತ ನೀಡಿತ್ತು. ಉಪಚುನಾವಣೆಯಲ್ಲಿ ಅನುಸರಿಸಿದ ರಣತಂತ್ರವನ್ನೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಅನುಸರಿಸಲು ನಿರ್ಧರಿಸಲಾಗಿದೆ.
ಕೆಳಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಣ್ಣ ಜಾತಿಗಳನ್ನು ಸಂಘಟಿಸಿದರೆ ಗೆಲುವು ಸುಲಭವಾಗುತ್ತದೆ ಎಂಬ ಸತ್ಯವನ್ನು ಬಿಜೆಪಿ ಕಂಡುಕೊಂಡಿದೆ. ಹೀಗಾಗಿ ಪ್ರಬಲ ಒಕ್ಕಲಿಗ ಸಮುದಾಯದ ಜೊತೆಗೆ ಸಣ್ಣ ಜಾತಿಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಬಿಜೆಪಿ ಹೆಚ್ಚು ಕಾರ್ಯಪ್ರವೃತ್ತವಾಗಿದೆ. ಇನ್ನು ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವ ಮಾಜಿ ಐಆರ್‍ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್‍ಗೌಡ, ಅಶೋಕ ಜಯರಾಂ ಬಿಜೆಪಿ ಸೇರಿದ್ದಾರೆ.

ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಬೃಹತ್ ಸಮಾವೇಶ ಮಾಡಿ, ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಮತ್ತು ಇಂಡವಾಳು ಸಚ್ಚಿದಾನಂದರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಮಾವೇಶಕ್ಕೆ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರುವ ಸಾಧ್ಯತೆ ಇದೆ.