ಬೆಂಗಳೂರು, ಡಿ. 21: ದೇಶಾದ್ಯಂತ ರೈತರು 3 ಹೊಸ ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ದರಣಿ ನಿರತರಾಗಿದ್ದರೂ ರಾಜ್ಯ ಬಿಜೆಪಿ ಸರ್ಕಾರ ರೈತರ, ಕಾರ್ಮಿಕರ ಸಮಸ್ಯೆಯನ್ನು ಪರಿಹಾರ ಮಾಡಬೇಕಾದ ಕರ್ತವ್ಯವನ್ನೇ ಮರೆತು ಹೋಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರಕ್ಕೆ ಪತ್ರ ಬರೆದು ರೈತರು ಹಾಗೂ ಕಾರ್ಮಿಕರನ್ನು ಕರೆದು ಚರ್ಚೆ ಮಾಡಲು ಹೇಳಿದ್ದೆ. ಆದರೆ ಈ ಸರ್ಕಾರ ಸತ್ತು ಹೋಗಿದೆ. ಸರ್ಕಾರ ಕಾರ್ಮಿಕರು ಏನಾದ್ರೂ ಪ್ರತಿಭಟನೆ ಮಾಡಿಕೊಳ್ಳಲಿ, ಯಾವ ಮ್ಯಾನೇಜ್ಮೆಂಟ್ ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಆನ್ ಲೈನ್ ಕ್ಲಾಸ್ ಬಂದ್ ಮಾಡಿಕೊಳ್ಳಲಿ ಏನಾದರೂ ಮಾಡಲಿ ಎಂದು ಕಣ್ಣು ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಳೆದ ಹಲವು ತಿಂಗಳಿಂದ ರೈತರು ಮತ್ತು ಕಾರ್ಮಿಕರು ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಅಂತಹ ರೈತರು, ಕಾರ್ಮಿಕರನ್ನು ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಸಿದ್ದರಾಮಯ್ಯ ಅವರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಸಿ ಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದಿದ್ದರು.