New Delhi : 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ (BJP) ಇದೀಗ ರಣತಂತ್ರ ರೂಪಿಸುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಪ್ರತಿಪಕ್ಷಗಳು ಬಿಹಾರದ (Bihar) ಪಾಟ್ನಾದಲ್ಲಿ ಸಭೆ ನಡೆಸಿ, ಒಗ್ಗಟ್ಟಿನ ಮಂತ್ರ ಪಠಿಸುತ್ತಿರುವ ಹೊತ್ತಿನಲ್ಲೇ ಹೊಸ ಕಾರ್ಯತಂತ್ರದೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ಕೇಸರಿ ಪಡೆ ಮುಂದಾಗಿದೆ.

ವಿರೋಧ ಪಕ್ಷಗಳ ಒಗ್ಗಟ್ಟಿನ ಅಸ್ತ್ರಕ್ಕೆ ಪ್ರತಿತಂತ್ರವಾಗಿ ಬಿಜೆಪಿ ಮೂರು ವಲಯಗಳಾಗಿ ದೇಶದ ರಾಜ್ಯಗಳನ್ನು ವಿಂಗಡಿಸಿ, ಪ್ರತಿ ವಲಯಕ್ಕೂ ಪ್ರತ್ಯೇಕ ರಣತಂತ್ರ ರೂಪಿಸಲು ಪ್ರತ್ಯೇಕ ಸಭೆಗಳನ್ನು ನಡೆಸಲು ಮುಂದಾಗಿದೆ. ಉತ್ತರ, ದಕ್ಷಿಣ ಮತ್ತು ಪೂರ್ವ ವಲಯಗಳನ್ನು ರಾಜ್ಯಗಳನ್ನು ವಿಂಗಡಿಸಲಾಗಿದ್ದು, ಈ ವಲಯಗಳ ಪ್ರತ್ಯೇಕ ಸಭೆಗಳು ಜುಲೈ (July) 6, 7 ಮತ್ತು 8 ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪುರ (Manipur) , ಮಿಜೋರಾಂ, ಮೇಘಾಲಯ ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್(Nagaland), ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳು ಪೂರ್ವ ವಲಯದಲ್ಲಿದ್ದು ಇದರ ಸಭೆ ಜುಲೈ 6 ರಂದು ಗುವಾಹಟಿಯಲ್ಲಿ ನಡೆಯಲಿದೆ.
ಜಮ್ಮು-ಕಾಶ್ಮೀರ (Jammu-Kashmir), ಲಡಾಖ್, ಹಿಮಾಚಲ ಪ್ರದೇಶ, ಪಂಜಾಬ್ (Panjab), ಚಂಡೀಗಢ, ರಾಜಸ್ಥಾನ, ಗುಜರಾತ್, ದಮನ್ ದಿಯು-ದಾದ್ರಾ ಮತ್ತು ನಗರ ಹವೇಲಿ, ಮಧ್ಯಪ್ರದೇಶ, ಛತ್ತೀಸ್ಗಢ, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮತ್ತು ಹರ್ಯಾಣವನ್ನು ಉತ್ತರ ವಲಯದಲ್ಲಿ ಇರಿಸಲಾಗಿದೆ. ಜುಲೈ 7 ರಂದು ದೆಹಲಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಕರ್ನಾಟಕ, ತೆಲಂಗಾಣ, ಕೇರಳ (Kerala), ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂಬೈ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ (Andaman and Nicobar) ಮತ್ತು ಲಕ್ಷದ್ವೀಪ ದಕ್ಷಿಣ ವಲಯದಲ್ಲಿದ್ದು, ಈ ರಾಜ್ಯಗಳ ಸಭೆ ಜುಲೈ 8 ರಂದು ಹೈದರಾಬಾದ್ನಲ್ಲಿ ನಡೆಯಲಿದೆ.
ಈ ಸಭೆಗಳಲ್ಲಿ ಬಿಜೆಪಿ ಪ್ರಮುಖ ನಾಯಕರು, ಆಯಾ ರಾಜ್ಯಗಳ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಸದರು, ಶಾಸಕರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಸಹ ಭಾಗವಹಿಸಲಿದ್ದಾರೆ. ಈ ಸಭೆಗಳಲ್ಲಿ ಮುಖಂಡರಿಗೆ ಬಿಜೆಪಿ ಹೊಸ ಜವಾಬ್ದಾರಿಗಳನ್ನೂ ನೀಡಲಿದೆ ಎಂದು ವರದಿಯಾಗಿದೆ.