ರಾಜ್ಯ ನಾಯಕರ ಉತ್ಸವದ ಬಳಿಕ ಸೋನಿಯೋತ್ಸವ, ರಾಹುಲೋತ್ಸವ ಆಯೋಜಿಸುವ ಇರಾದೆಯಿದೆಯೇ? ಇದುವರೆಗೆ ಸುಳ್ಳಿನ ಉತ್ಸವ ಮಾಡಿದ ಕಾಂಗ್ರೆಸ್(Congress) ಈಗ ಹಾಸ್ಯೋತ್ಸವಕ್ಕೆ ಮುನ್ನುಡಿ ಬರೆಯುತ್ತಿದೆ. ಅಧಿಕಾರವಿಲ್ಲದೆ ಬೀದಿಗೆ ಬಿದ್ದಿರುವವರಿಗೆ ಈಗ ಭರಪೂರ ಮನೋರಂಜನೆ. ಸಿದ್ದರಾಮೋತ್ಸವದ ಸುದ್ದಿ ಕೇಳಿದ್ದೇ ತಡ ಕಾಂಗ್ರೆಸ್ ಪಕ್ಷದಲ್ಲಿ ಉತ್ಸವದ ಚಟುವಟಿಕೆಗಳು ಗರಿಗೆದರಿವೆ.
ಶಿವಕುಮಾರೋತ್ಸವ, ಖರ್ಗೆಯೋತ್ಸವ, ಪರಮೇಶ್ವರೋತ್ಸವ ಜೊತೆಗೆ ಜಾರ್ಜಿಗೊಂದು ಉತ್ಸವ, ಜಮೀರನಿಗೊಂದು ಉತ್ಸವ ಮಾಡಿಬಿಡಿ! ಒಟ್ಟಾರೆ ಇದು ಕಾಂಗ್ರೆಸ್ ಹಾಸ್ಯೋತ್ಸವ ಅಲ್ಲದೆ ಮತ್ತೇನಲ್ಲ ಎಂದು ಬಿಜೆಪಿ(BJP) ವ್ಯಂಗ್ಯವಾಡಿದೆ. ಡಿಕೆಶಿ(DKS) ಅವರೇ ನೀವೆಷ್ಟು ಅಸಮರ್ಥರು ಎಂದು ಈಗ ತಿಳಿಯುತ್ತಿದೆ. ಸಿದ್ದರಾಮಯ್ಯ(Siddaramaiah) ಅವರನ್ನು ಬಿಡಿ, ಅವರ ಪಟಾಲಂ ನಡೆಸುತ್ತಿರುವ ಪ್ರಚಾರದ ಅಬ್ಬರ ನಿಲ್ಲಿಸುವುದಕ್ಕೂ ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಿ, ಸಿದ್ದರಾಮೋತ್ಸವದ ಪ್ರಚಾರ ಸಮಿತಿಗೆ ಗೌರವಾಧ್ಯಕ್ಷರಾಗಿ ಬಿಡಿ ಸಾಕು.
ಸಿದ್ದರಾಮೋತ್ಸವದಲ್ಲಿ ಕಾಂಗ್ರೆಸ್ ಪಕ್ಷದ ಆಚಾರ, ವಿಚಾರಗಳ ಪ್ರಚಾರ ನಡೆಯುತ್ತದೆಯೋ ಅಥವಾ ಸಿದ್ದರಾಮಯ್ಯ ಆಚಾರ, ವಿಚಾರದ ಪ್ರಚಾರ ನಡೆಯುತ್ತದೆಯೋ? ಬಡಪಾಯಿಗಳಿಗೆ ನೋಟಿಸ್ ನೀಡುವ ಡಿ.ಕೆ.ಶಿವಕುಮಾರ್ ಅವರೆಲ್ಲಿದ್ದಾರೆ ಈಗ? ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆ ಬೇಡ, ಪಕ್ಷಪೂಜೆ ಮಾತ್ರ ನಡೆಯಲಿ ಎಂದು ಉಪದೇಶ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್ ಅವರೇ, ದಾವಣಗೆರೆಯಲ್ಲಿ ನಡೆಯುತ್ತಿರುವುದೇನು? ಅದು ಸಿದ್ದರಾಮಯ್ಯ ಕೇಂದ್ರೀಕೃತ ವ್ಯಕ್ತಿ ಪೂಜೆಯಲ್ಲವೇ? ಸಿದ್ದರಾಮೋತ್ಸವಕ್ಕೆ ನಿಮ್ಮ ದೇಣಿಗೆ ಏನು?
ರಾಜ್ಯದಲ್ಲಿ ಸ್ವಪ್ರತಿಷ್ಠೆಗಾಗಿ ಕೈ ನಾಯಕರ ಉತ್ಸವ ಸರಣಿ ಆರಂಭಗೊಳ್ಳುತ್ತಿದೆ. ಒಂದು ಕಡೆ ಪಕ್ಷದ ಪುನಶ್ಚೇತನಕ್ಕಾಗಿ ಭಾರತ ಜೋಡೋ ಯಾತ್ರೆ, ಇನ್ನೊಂದು ಕಡೆ ಸಿಎಂ ಅಭ್ಯರ್ಥಿಗಳ ವ್ಯಕ್ತಿ ಪೂಜೋತ್ಸವ. ಒಡೆದ ಮನೆಯಲ್ಲಿ ಎಷ್ಟು ಉತ್ಸವ ಮಾಡಿದರೇನು ಫಲ?
ಕಾಂಗ್ರೆಸ್ ವ್ಯಕ್ತಿ ಕೇಂದ್ರೀತ ಪಕ್ಷವಲ್ಲ, ಪಕ್ಷ ಕೇಂದ್ರೀತ ಎಂದು ಹೇಳಿಕೊಂಡೆ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ಇದೇನು ನಿಮ್ಮ ಉತ್ಸವಗಳು? ಎಲ್ಲರೂ ಉತ್ಸವ ಮೂರ್ತಿಗಳಾದರೆ, ಹೊರುವವರು ಯಾರು?
ಕಾಂಗ್ರೆಸ್ ಈಗ ವ್ಯಕ್ತಿ ಪೂಜೆಯ ಮೂಲಕ ಪಕ್ಷ ಕಟ್ಟುತ್ತೇವೆ ಎಂಬ ಭ್ರಮೆಯಲ್ಲಿದೆ. ವಾಸ್ತವದಲ್ಲಿ ಕಾಂಗ್ರೆಸ್ ಬೀದಿಗೆ ಬಂದಿದ್ದೇ ನಕಲಿ ಗಾಂಧಿ ಕುಟುಂಬದ ವ್ಯಕ್ತಿಗಳ ಪೂಜೆಯಿಂದ ಎನ್ನುವುದನ್ನು ಮರೆತಿದೆ. ಸಿದ್ದರಾಮೋತ್ಸವದ ಬೆನ್ನಿಗೆ ಉಳಿದ ಘಟಾನುಘಟಿ ನಾಯಕರು ಮೈ ಕೊಡವಿ ನಿಂತಿದ್ದಾರೆ. ಕಾಂಗ್ರೆಸ್ ಹಾಸ್ಯೋತ್ಸವಕ್ಕೆ ಕ್ಷಣಗಣನೆ ಆರಂಭ ಎಂದು ಲೇವಡಿ ಮಾಡಿದೆ.