ಬಿಜೆಪಿಯದ್ದು ಪಿಕ್ ಪಾಕೆಟ್ ಸರ್ಕಾರ: ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು, ಜೂ. 11: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ‘100 ನಾಟ್ ಔಟ್’ ಆಂದೋಲನ ಆರಂಭಿಸಿದ್ದು, ‘ಬಿಜೆಪಿಯದ್ದು ಪಿಕ್ ಪಾಕೆಟ್ ಸರ್ಕಾರ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬಹಳ ವಿಶೇಷ ಹಾಗೂ ಐತಿಹಾಸಿಕ ದಿನಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಭಾರತ ಸರ್ಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ಬರೆ ಎಳೆದಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ಕೇವಲ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡು ವಾಹನ ಚಲಾಯಿಸುವವರಿಗೆ ಮಾತ್ರ ಪರಿಣಾಮ ಬೀರುತ್ತಿಲ್ಲ. ಪ್ರತಿ ನಾಗರೀಕನೂ ಖರೀದಿಸುವ ಪ್ರತಿ ವಸ್ತುಗಳು ದುಬಾರಿಯಾಗುವಂತೆ ಬರೆ ಎಳೆದಿದ್ದಾರೆ.

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಾಕಷ್ಟು ಹೋರಾಟ ಮಾಡಿದ್ದನ್ನು ನಾವು ನೋಡಿದ್ದೇವೆ. ಇದೇ ಯಡಿಯೂರಪ್ಪ, ಶೋಭ ಕರಂದ್ಲಾಜೆ ಹಾಗೂ ಸಚಿವರೆಲ್ಲರು ಯುಪಿಎ ಸರ್ಕಾರದ ಅವಧಿಯಲ್ಲಿ ಒಂದೆರಡು ರೂಪಾಯಿ ಹೆಚ್ಚಾದಾಗ ಗಲಾಟೆ ಮಾಡಿದ್ದರು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ 42 ಕ್ಕೂ ಹೆಚ್ಚು ಬಾರಿ ಬೆಲೆ ಏರಿಕೆ ಮಾಡಿದೆ. ಏಪ್ರಿಲ್ ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ದರ ಹೆಚ್ಚಾಗಲಿಲ್ಲ. ಅದನ್ನು ಬಿಟ್ಟರೆ ಉಳಿದ ಐದು ತಿಂಗಳೂ ಬೆಲೆ ಹೆಚ್ಚಳ ಮಾಡಿದೆ.

ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸಿ, 20.60 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಸರ್ಕಾರ ತನ್ನ ಆದಾಯ ವೃದ್ಧಿ ಮಾಡಿಕೊಳ್ಳಲು, ಬೊಕ್ಕಸ ತುಂಬಿಸಿಕೊಳ್ಳಲು ಎಲ್ಲ ಪದಾರ್ಥಗಳ ಬೆಲೆ ಹೆಚ್ಚಳ ಮಾಡುತ್ತಿದೆ. ಇದು ಜನರ ನಿತ್ಯ ಬದುಕಿನಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ. ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದ್ದು, ಇದೊಂದು ಪಿಕ್ ಪಾಕೆಟ್ ಸರ್ಕಾರ. ಇದರ ಬಗ್ಗೆ ನಾವು ಜನರಲ್ಲಿ ತಿಳುವಳಿಕೆ ಮೂಡಿಸಿ, ಹೋರಾಟ ಮಾಡಬೇಕಿದೆ.

ಈ ಹಿಂದೆ ಇಂಧನ ಬೆಲೆ ಎಷ್ಟಿತ್ತು, ಈಗ ಎಷ್ಟಾಗಿದೆ ಎಂದು ನಾವು ತಿಳಿಸಿದ್ದೇವೆ. ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಇಳಿಸಿ ತೈಲಬೆಲೆಗೆ ಅನುಗುಣವಾಗಿ ದರ ಇಳಿಸಬೇಕು. ಜನರಿಗೆ ಹಣ ವಾಪಸ್ ನೀಡಬೇಕು, ಜನರಿಂದ ದೋಚುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಾವಿಂದು ಪ್ರತಿಭಟನೆ ಆರಂಭಿಸಿದ್ದು, ರಾಜ್ಯದಲ್ಲಿ ಒಟ್ಟು 5 ಸಾವಿರ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಹೋರಾಟ ಐದು ದಿನಗಳ ಕಾಲ ನಡೆಯಲಿದ್ದು, ಇಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ನಾಳೆ ತಾಲೂಕು ಕೇಂದ್ರ, ನಾಡಿದ್ದು ಜಿಲ್ಲಾ ಪಂಚಾಯ್ತಿ ಮತ್ತು ಹೋಬಳಿ ಕೇಂದ್ರಗಳಲ್ಲಿ 14ರಂದು ಗ್ರಾಮಪಂಚಾಯ್ತಿ ವ್ಯಾಪ್ತಿ ಪೆಟ್ರೋಲ್ ಬಂಕ್ ಬಳಿ ಹಾಗೂ 15ರಂದು ಇತರೆ ಕಡೆಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.

Latest News

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.

ದೇಶ-ವಿದೇಶ

8ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ; `ಜನಾದೇಶಕ್ಕೆ ದ್ರೋಹʼ : ಬಿಜೆಪಿ

164 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಬಿಹಾರದಲ್ಲಿ ಹೊಸ ಸರ್ಕಾರ ರಚಿಸಲು ಏಳು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಇಂದು ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.