ಉಡುಪಿ ಡಿ 16 : ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡುವುದು ಕೊಚ್ಚೆಗೆ ಕಲ್ಲು ಎಸೆದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪ್ರತಿಕ್ರಿಯಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಾಲಿಗೆಗೆ ಲಂಗು, ಲಗಾಮು, ಸಂಸ್ಕಾರ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಿಡಿ ಕಾರಿದ್ದಾರೆ.
ಉಡುಪಿಯಲ್ಲಿ ನಡೆದ ನಡೆದ ಶಕ್ತಿಕೇಂದ್ರಗಳ ಪ್ರಮುಖರ ಸಮಾವೇಶ ದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ನಾಲಿಗೆಗೆ ಲಂಗು, ಲಗಾಮು, ಸಂಸ್ಕಾರ ಏನೂ ಇಲ್ಲ, ಹಾಗಾಗಿ ಅವರು ಹಾದಿಬೀದಿಯಲ್ಲಿ ಪ್ರಶ್ನೆ ಮಾಡ್ತಾರೆ. ದೇಶಕೋಸ್ಕರ ಬಿಜೆಪಿಯ ಯಾರಾದರೂ ಬಲಿದಾನ ಕೊಟ್ಟಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಈ ಸಾಲಿಗೆ ಬರುವ ಮೊದಲ ಹೆಸರು ಶ್ಯಾಮ್ ಪ್ರಸಾದ್ ಮುಖರ್ಜಿ, ಸಿದ್ದರಾಮಯ್ಯ ಮನೆಯಲ್ಲಿ ಕೂತು ಶ್ಯಾಮ್ ಪ್ರಸಾದ್ ಮುಖರ್ಜಿ ಯಾರೆಂದು ಓದಲಿ. ಆತ್ಮಸಾಕ್ಷಿಯನ್ನು ಭಗವಂತ ಎಲ್ಲರಿಗೂ ಕೊಟ್ಟಿದ್ದಾನೆ, ಆದರೆ ಆತ್ಮಸಾಕ್ಷಿಯನ್ನು ಕೆಲವರು ಕೊಂದು ಹಾಕುತ್ತಾರೆ ಅದರಲ್ಲಿ ನಮ್ಮ ವಿರೋಧ ಪಕ್ಷದ ನಾಯಕರೂ ಕೆಲವರಿದ್ದಾರೆ ಎಂದು ಸಂತೋಷ್ ಕಿಡಿ ಕಾರಿದರು.
ಸಿದ್ದರಾಮಯ್ಯ ಅವರು ಸಂಘವನ್ನು ಪುಂಖಾನುಪುಂಖವಾಗಿ ಬೈಯುತ್ತಾ ಓಡಾಡಿದರು. ಸಿದ್ದರಾಮಯ್ಯ ಈಗಾಗಲೇ ಕಸದಬುಟ್ಟಿಯಲ್ಲಿ ಇದ್ದಾರೆ, ಮುಂದೆ ಅವರು ದೊಡ್ಡ ಕಸದಬುಟ್ಟಿಗೆ ಹೋಗುತ್ತಾರೆ. ಸಿದ್ದರಾಮಯ್ಯ ಅವರ ಎಲ್ಲ ಮಾತಿಗೆ ಉತ್ತರ ಕೊಡಬೇಕಾಗಿಲ್ಲ. ಜನ ಬಿಜೆಪಿಗೆ ಮತ ಕೊಟ್ಟದ್ದು ಅಭಿವೃದ್ಧಿ ವಿಚಾರಕ್ಕೆ, ಈ ಹಿನ್ನೆಲೆಯಲ್ಲಿ ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಬೇಕಾಗಿಲ್ಲ ಎಂದು ಬಿ.ಎಲ್. ಸಂತೋಷ್ ಪ್ರತಿಕ್ರಿಯಿಸಿದ್ದಾರೆ.