ದೆಹಲಿ, ಎ. 01: ಬಾಲಿವುಡ್ನ ಖ್ಯಾತ ನಟಿ ಹಾಗೂ ರಾಜಕಾರಣಿ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್ ನಿಂದಾ ಬಳಲುತ್ತಿದ್ದಾರೆ ಎಂದು ಅವರ ಪತಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ತಿಳಿಸಿದ್ದಾರೆ. ಕಿರಣ್ ಖೇರ್ ಅವರಿಗೆ ಬ್ಲಡ್ ಕ್ಯಾನ್ಸರ್ನ ವಿಧಗಳಲ್ಲೊಂದಾದ ಮಲ್ಟಿಪಲ್ ಮೈಲೋಮಾ ಕಾಣಿಸಿಕೊಂಡಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅನುಪಮ್ ಖೇರ್ ಮತ್ತು ಅವರ ಪುತ್ರ ಸಿಕಂದರ್ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
ಕಿರಣ್ ಅವರು ಮಲ್ಟಿಪಲ್ ಮೈಲೊಮಾ ರೋಗದ ಚಿಕಿತ್ಸೆಗೊಳಪಡಲಿದ್ದಾರೆ. ವದಂತಿಗಳಿಂದಾಗಿ ಪರಿಸ್ಥಿತಿ ಬಿಗಡಾಯಿಸುವುದಕ್ಕಿಂತ ಮುನ್ನ ಸಿಕಂದರ್ ಮತ್ತು ನಾನು ಈ ಬಗ್ಗೆ ಎಲ್ಲರಿಗೆ ವಿಷಯವನ್ನು ತಿಳಿಸಲು ಬಯಸುತ್ತೇವೆ . ಅವರು ಈಗ ಚಿಕಿತ್ಸೆಗೊಳಪಟ್ಟಿದ್ದು, ಮತ್ತಷ್ಟು ಶಕ್ತಿಶಾಲಿಯಾಗಿ ಮರಳಿ ಬರುತ್ತಾರೆ. ಅವರನ್ನು ತಜ್ಞ ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಆಕೆ ಛಲಗಾತಿ, ಇದನ್ನೂ ಗೆಲ್ಲುತ್ತಾಳೆ ಎಂದು ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.
ಆಕೆಯ ಹೃದಯ ವಿಶಾಲವಾದುದು. ಹಾಗಾಗಿ ತುಂಬಾ ಜನರು ಆಕೆಯನ್ನು ಪ್ರೀತಿಸುತ್ತಾರೆ. ಆಕೆಗೆ ನಿಮ್ಮ ಪ್ರೀತಿಯನ್ನು ಕಳಿಸಿ, ನಿಮ್ಮ ಹೃದಯ ಮತ್ತು ಪ್ರಾರ್ಥನೆಯಲ್ಲಿ ಆಕೆ ಇರಲಿ. ಆಕೆ ಚೇತರಿಸಿಕೊಳ್ಳುತ್ತಿದ್ದು, ಬೆಂಬಲ ಮತ್ತು ಪ್ರೀತಿ ನೀಡಿದ ಎಲ್ಲರಿಗೂ ನಮ್ಮ ಧನ್ಯವಾದಗಳು ಎಂದಿದ್ದಾರೆ ಅನುಪಮ್ ಖೇರ್.