25% of contractor’s bill arrears BBMP: ready to stop works and stage protest
Bengaluru: ಕಳೆದ ಕೆಲ ತಿಂಗಳುಗಳಿಂದ ರಾಜ್ಯ ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿದ್ದ ಬಿಬಿಎಂಪಿ (BBMP) ಗುತ್ತಿಗೆದಾರರಿಗೆ ಹಣ ನೀಡದೆ ಬಾಕಿ ಉಳಿಸಿಕೊಂಡಿರುವುದು ಇದೀಗ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ 2 ವರ್ಷದಿಂದ ಬರೋಬ್ಬರಿ 1,600 ಕೋಟಿ ರೂ. ಹಣವನ್ನ ಪಾಲಿಕೆ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿರುವ ಗುತ್ತಿಗೆದಾರರು, ಶೇ.75ರಷ್ಟು ಕಾಮಗಾರಿ ಬಿಲ್ ಮಾತ್ರ ಪಾಲಿಕೆ ಪಾವತಿಸಿದ್ದು, ಉಳಿದ ಶೇಕಡಾ 25ರಷ್ಟು ಬಿಲ್ ಪಾವತಿಸಿ ಎಂದು ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.

ಬಾಕಿ ಬಿಲ್ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್ಗೂ (D K Shivakumar) ಪತ್ರ ಬರೆದಿದ್ದರು . ನಂತರದಲ್ಲಿ ಭೇಟಿಯಾಗಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅವರು ಬಿಬಿಎಂಪಿಯ ಗುತ್ತಿಗೆದಾರರು, ಇಂದಿನಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನ ಬಂದ್ ಮಾಡಿ ಪ್ರತಿಭಟಿಸೋಕೆ ಸಜ್ಜಾಗಿದ್ದಾರೆ. ಪಾಲಿಕೆಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗೆ ಬ್ರೇಕ್ ಹಾಕಲು ಸಜ್ಜಾಗಿರೋ ಗುತ್ತಿಗೆದಾರರು, ಬಾಕಿ ಬಿಲ್ ಕ್ಲಿಯರ್ (Bill Clear) ಆಗುವ ತನಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ರಸ್ತೆ ಕಾಮಗಾರಿ,ಮೂಲಭೂತ ಸೌಕರ್ಯ ವಿಭಾಗದ ಕಾಮಗಾರಿಗಳು,ವಾರ್ಡ್ ಮಟ್ಟದ ನಿರ್ವಹಣಾ ಕಾಮಗಾರಿಗಳು,ಬೃಹತ್ ನೀರುಗಾಲುವೆ, ವೈಟ್ ಟಾಪಿಂಗ್ ಕಾಮಗಾರಿ, ಬಿಬಿಎಂಪಿ ಎಲೆಕ್ಟ್ರಿಕ್ (BBMP Electric) ವಿಭಾಗದ ಕಾಮಗಾರಿಗಳು ಸ್ಥಾಗಿತವಾಗಲಿದ್ದು ಇದರಿಂದ ಸಾರ್ವಜನಿಕರಿಗೆ ಅಡಚಣೆ ಎದುರಾಗೋ ಸಾಧ್ಯತೆ ದಟ್ಟವಾಗಿದೆ.
ಸದ್ಯ ಈ ಹಿಂದೆ ಬಿಬಿಎಂಪಿಯ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದ ಆರೋಪ ಸಖತ್ ಸದ್ದುಮಾಡಿತ್ತು. ಆದ್ರೆ ಇದೀಗ ಎಲ್ಲಾ ಕಾಮಗಾರಿಗೆ ಶೇಕಡ 25 ರಷ್ಟು ಬಿಲ್ ಬಾಕಿ ಉಳಿಸಿರೋದು ಹಲವು ಅನುಮಾನ ಹುಟ್ಟುಹಾಕಿದೆ. ಇತ್ತ ಕಾಮಗಾರಿ ಮಾಡಿ ಅರೆಬರೆ ಬಿಲ್ ಪಡೆದ ಗುತ್ತಿಗೆದಾರರಿಗೆ ಪಾಲಿಕೆ ಇನ್ನಾದ್ರೂ ಬಾಕಿ ಬಿಲ್ ನೀಡುತ್ತಾ. ಮಧ್ಯಂತರದಲ್ಲಿರುವ ಕಾಮಗಾರಿಗಳು ಪೂರ್ಣಗೊಳ್ಳುತ್ತವಾ ಅನ್ನೋದನ್ನ ಕಾದುನೋಡಬೇಕಿದೆ.