Bengaluru: ನಿಯಮಗಳನ್ನು ಎಷ್ಟೇ ಬಿಗಿಗೊಳಿಸಿ, ಭಾರೀ ಮೊತ್ತದ ದಂಡ ವಿಧಿಸುತ್ತಿದ್ದರೂ ಬೆಂಗಳೂರು (Bengaluru) ನಗರದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ, ಇತರರ ಜೀವಕ್ಕೆ ಅಪಾಯ ತರುವ ಹುಚ್ಚಾಟಗಳಂತೂ ಕಡಿಮೆ ಆಗುತ್ತಿಲ್ಲ. ದಂಡದಂತಹ ಶಿಕ್ಷೆಯಿಂದ ಮನಸ್ಥಿತಿ ಬದಲಾಗುವುದಿಲ್ಲ ಎಂದರಿತ ಪೊಲೀಸರು ಈದೀಗ ಚಾಲನಾ ಪರವಾನಗಿ ರದ್ದುಗೊಳಿಸುವ ಅಸ್ತ್ರವನ್ನು ಪ್ರಯೋಗಿಸಲಾರಂಭಿಸಿದ್ದಾರೆ.

ಮದ್ಯ ಸೇವನೆ, ಅಪಾಯಕಾರಿ ವೀಲಿಂಗ್ ಮೂಲಕ ರಸ್ತೆ ಸಂಚಾರಕ್ಕೆ ಸಂಚಕಾರ ತರುವ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಸಂಚಾರ ಪೊಲೀಸರು, ಗಂಭೀರ ಸ್ವರೂಪದ ಸಂಚಾರ ನಿಯಮ ಉಲ್ಲಂಘನೆಯಡಿ ಕಳೆದ ಆರು ತಿಂಗಳಲ್ಲಿ 6939 ಪ್ರಕರಣ ದಾಖಲಿಸಿ, 1390 ಚಾಲನಾ ಪರವಾನಗಿ (DL) ಅಮಾನತುಗೊಳಿಸಿ ಬಿಸಿ ಮುಟ್ಟಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರು ಹಾಗೂ ಅಪಾಯಕಾರಿ ವೀಲಿಂಗ್ ಮಾಡುವ ಚಾಲಕರ ಸಂಖ್ಯೆ ಹೆಚ್ಚುಗಿದ್ದು . ಅದು ಅಪಾಘಾತ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ, ಪ್ರತಿನಿತ್ಯ ಕನಿಷ್ಠ ಎರಡು ಗಂಭೀರ ಸ್ವರೂಪದ ಅಪಘಾತಗಳು ಸಂಭವಿಸುತ್ತಿವೆ. ಅಪಘಾತಗಳಲ್ಲಿ ನೂರಾರು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ .

ಇನ್ನು ಕೆಲವರು ಗಾಯಗೊಂಡು ನರಳುವವರು ಇದ್ದಾರೆ . ಈ ಹಿನ್ನೆಲೆಯಲ್ಲಿ ಗಂಭೀರ ಸ್ವರೂಪದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ, ಮತ್ತೊಬ್ಬರ ಜೀವಕ್ಕೆ ಕುತ್ತು ತರುವ ಚಾಲಕರ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿ, ದಂಡ ಕಟ್ಟಸಿಕೊಳ್ಳುತ್ತಿದ್ದಾರೆ.ಅಪಾಯಕಾರಿ ವೀಲಿಂಗ್, ಡ್ರಂಕ್ ಆಂಡ್ ಡ್ರೈವ್ (Drunk and Drive) ಹಾಗೂ ನಿರಂತರವಾಗಿ ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತೆ ವಾಹನ ಚಲಾಯಿಸುವ ಚಾಲಕರ ಚಾಲನಾ ಪರವಾನಗಿ ಅಮಾನತುಗೊಳಿಸಲು ಆರ್‌ಟಿಒ (RTO) ಅಧಿಕಾರಿಗಳಿಗೆ ಸಂಚಾರ ಪೊಲೀಸರು ಶಿಫಾರಸು ಮಾಡಿದ್ದಾರೆ.
ಈ ಕುರಿತಾಗಿ ಈ ಹಿಂದೆಯೂ ಹಲವಾರು ದೂರುಗಳು ಕೇಳಿ ಬಂದಿತ್ತು.ಈ ಪೈಕಿ, 2023ನೇ ಸಾಲಿನಲ್ಲಿ ವೀಲಿಂಗ್, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಮತ್ತು ಹೆಚ್ಚಿನ ಅಪಘಾತಗಳಿಗೆ ಸಂಬಂಧಿಸಿದ ಚಾಲಕರ ವಿರುದ್ಧ ಒಟ್ಟು 8,156 ಪ್ರಕರಣಗಳನ್ನು ದಾಖಲಿಸಿದ್ದು. ಅದರಲ್ಲಿ 1663 ಡಿಎಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಪ್ರಸಕ್ತ ಸಾಲಿನ ಆರು ಏಳು ತಿಂಗಳ ಅವಧಿಯಲ್ಲಿ 6,939 ಪ್ರಕರಣ ದಾಖಲಿಸಲಾಗಿದ್ದು ಅದರಲ್ಲಿ 1390 ಡಿ.ಎಲ್.ಗಳನ್ನು ಅಮಾನತುಗೊಳಿಸಿದ್ದಾರೆ.
ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಅಮಾನತು ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ.2023ರಲ್ಲಿ 3,713 ಮತ್ತು 2024ರಲ್ಲಿ 3,400 ಡಿ.ಎಲ್.ಗಳ ಅಮಾನತಿಗೆ ಸಂಚಾರ ಪೊಲೀಸರು ಆರ್‌ಟಿಒಗಳಿಗೆ ಶಿಫಾರಸು ಮಾಡಿದ್ದರು. ಆದರೆ, ಅದರಲ್ಲಿ ಕ್ರಮವಾಗಿ 1642 ಮತ್ತು 1367 ಮಾತ್ರ ಅಮಾನತಾಗಿವೆ. ಅದು ಬಿಟ್ಟರೆ, ಕೆಲ ತಪ್ಪಿತಸ್ಥ ಚಾಲಕರು ಸಾರಿಗೆ ಅಧಿಕಾರಿಗಳೊಂದಿಗೆ ಹಣ ವ್ಯವಹಾರದ ಮಾತುಕತೆ ನಡೆಸಿ, ಚಾಲನಾ ಪರವಾನಗಿ ರದ್ದಾಗದಂತೆ ತಡೆ ಹಿಡಿಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.