Bengaluru: ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನತೆಗೆ ಗುಡ್ ನ್ಯೂಸ್ (Good news) ಒಂದು ದೊರೆತಿದೆ. ಹೌದು ನಮ್ಮ ಮೆಟ್ರೋ (Metro) ರೈಲು ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದ್ದ ಬಿಎಂಆರ್ಸಿಎಲ್ (BMRCL) ಇದೀಗ ಆ ವಿಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಮೆಟ್ರೋ ಟಿಕೆಟ್ ದರ (Metro ticket price) ಹೆಚ್ಚಳ ಸಂಬಂಧ ಕೇಂದ್ರ ಸರ್ಕಾರ (Central Govt) ವರದಿ ಕೇಳಿದ್ದು, ಸದ್ಯದ ಮಟ್ಟಿಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಈ ವರ್ಷ ಅನುಮಾನ ಎಂದು ಮೂಲಗಳು ತಿಳಿಸಿವೆ.ಕಳೆದ ವಾರವಷ್ಟೇ ಟಿಕೆಟ್ ದರ ಏರಿಕೆ ಸಂಬಂಧ ಬಿಎಂಆರ್ಸಿಎಲ್ (BMRCL) ಸಭೆ ನಡೆಸಿತ್ತು. ಶೇ 45ರಷ್ಟು ದರ ಹೆಚ್ಚಳ ಮಾಡಲು ನಿರ್ಧರಿಸಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎನ್ನಲಾಗಿದೆ.

ಇನ್ನು ಕರ್ನಾಟಕದಲ್ಲಿ (Karnataka) ಈಗಾಗಲೇ ಸರ್ಕಾರಿ ಬಸ್ ಟಿಕೆಟ್ ದರ (KarnatakaGovt Bus Ticket Fare) ಹೆಚ್ಚಳವಾಗಿದೆ. ಈ ಸಂದರ್ಭದಲ್ಲಿ ಮತ್ತೆ ಮೆಟ್ರೋ ಟಿಕೆಟ್ ದರ ಕೂಡ ಹೆಚ್ಚಳವಾದರೆ ಜನರಿಗೆ ಹೆಚ್ಚಿನ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಅಲ್ಲದೆ, ಪ್ರಯಾಣ ದರ ಏರಿಕೆ ನಿರ್ಧಾರ ಅಂತಿಮಗೊಳಿಸುವುದಕ್ಕೂ ಮುನ್ನ ವರದಿ ಸಲ್ಲಿಸುವಂತೆ ಕೇಂದ್ರ ತಂಡ ಸೂಚನೆ ನೀಡಿದೆ. ಹೀಗಾಗಿ ವರದಿ ಸಲ್ಲಿಕೆಗೆ ಬಿಎಂಆರ್ಸಿಎಲ್ ಸಮಯ ಕೇಳಿದೆ. ಇದರ ಕುರಿತಾಗಿ ಅತಿ ಶೀಘ್ರವಾಗಿ ಮಾಹಿತಿ ನೀಡುವುದಾಗಿ ಕೇಳಿಕೊಂಡಿದೆ.
ಬಿಎಂಆರ್ಸಿಎಲ್ (BMRCL) ಫೆಬ್ರವರಿ1 ರಿಂದ ಮೆಟ್ರೋ ಪ್ರಯಾಣ ದರ ಏರಿಕೆಗೆ ಮುಂದಾಗಿತ್ತು. ಅದಕ್ಕಾಗಿ ಪ್ರಯಾಣಿಕರಿಂದ ಅಭಿಪ್ರಾಯಗಳು, ಸಲಹೆಗಳನ್ನೂ ಸ್ವೀಕರಿಸಿತ್ತು. ಪ್ರಯಾಣಿಕರಿಂದ ದರ ಏರಿಕೆಗೆ ವಿರೋಧ ವ್ಯಕ್ತವಾಗಿದ್ದರೂ ನಿರ್ವಹಣೆ ನೆಪವೊಡ್ಡಿ ದರ ಏರಿಕೆ ಬಿಎಂಆರ್ಸಿಎಲ್ ಮುಂದಾಗಿತ್ತು. ಆದರೆ ಇದೀಗ ಬಿಎಂಆರ್ಸಿಎಲ್ (BMRCL) ನಿರ್ಧಾರಕ್ಕೆ ಕೇಂದ್ರದಿಂದ ತಾತ್ಕಾಲಿಕ ತಡೆಯೊಡ್ಡಲಾಗಿದೆ.ನಮ್ಮ ಮೆಟ್ರೋ ಈ ಹಿಂದೆ 2017 ರಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿತ್ತು. ಬಳಿಕ ಪ್ರಯಾಣ ದರ ಪರಿಷ್ಕರಣೆ ಮಾಡುವ ಪ್ರಯತ್ನ ಮಾಡಿರಲಿಲ್ಲ. ಆದರೆ, ಇದೀಗ ಪ್ರಯಾಣ ದರ ಏರಿಕೆಗೆ ಮುಂದಾಗಿದ್ದ ಬಿಎಂಆರ್ಸಿಎಲ್ಗೆ ಹಿನ್ನಡೆಯಾಗಿದೆ.