ಬೆಂಗಳೂರು ನ 12 : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಕಡಿಮೆಯಾಗುತ್ತಲೇ ಶಾಲೆ, ಕಾಲೇಜುಗಳು ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ (Student Bus Pass) ವಿತರಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಬಿಎಂಟಿಸಿ ಪತ್ರಿಕಾ ಪ್ರಕರಣೆ ಹೊರಡಿಸಿದೆ.
2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ರಾಜ್ಯ ಸರಕಾರ ನಿರ್ದೇಶನದಂತೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಣೆಯನ್ನು ಮಾಡಲಾಗುತ್ತಿದೆ. ಇಂದಿನಿಂದಲೇ ವಿದ್ಯಾರ್ಥಿಗಳು ತಮ್ಮ ಬಸ್ ಪಾಸ್ ಪಡೆಯಲು ಸೇವಾ ಸಿಂಧು ಪೋರ್ಟಲ್ (https://sevasindhu.karnataka.gov.in) ಮೂಲಕ ಅರ್ಜಿ ಸಲ್ಲಿಸುವಂತೆ ಸೂಚನೆಯನ್ನು ನೀಡಿದೆ. ವಿದ್ಯಾರ್ಥಿಗಳ ಅರ್ಜಿಯನ್ನು ಪರಿಶೀಲಿಸಿದ ನಂತರದಲ್ಲಿ ಬಿಎಂಟಿಸಿ ಪಾಸ್ ನೀಡುವ ಕಾರ್ಯವನ್ನು ಮಾಡಲಿದೆ.
ಬಸ್ ಪಾಸ್ ಪಡೆಯಲು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಬೆಂಗಳೂರು ಒನ್ ಕೇಂದ್ರದ ಮೂಲಕ ನಿಗದಿತ ದಿನಾಂಕಗಳಂದು ಬಸ್ ಪಾಸ್ ವಿತರಣೆಯನ್ನು ಮಾಡಲಾಗುತ್ತದೆ. ಕಾಲೇಜಿನ ಗುರುತಿನ ಚೀಟಿ, ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ, ಶುಲ್ಕ ರಸೀದಿಯನ್ನು ಹಾಜರು ಪಡಿಸಿ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ತಡವಾಗಿ ಶೈಕ್ಷಣಿ ವರ್ಷ ಆರಂಭಗೊಂಡಿದ್ದು, ಬಿಎಂಟಿಸಿ ಕೂಡ ತಡವಾಗಿಯೇ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆಯನ್ನು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸುಗಳನ್ನು ದಿನಾಂಕ 14-11-2021ರಿಂದ ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.