Kalburgi : ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport)ಕ್ಕೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದ ಘಟನೆ ಮಾಸುವ ಮುನ್ನವೇ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇಂತಹದೇ ಘಟನೆ ಎದುರಾಗಿದೆ.ಅನಾಮಧೇಯ ವ್ಯಕ್ತಿಯಿಂದ ಕಲಬುರಗಿ ವಿಮಾನ ನಿಲ್ದಾಣವನ್ನೇ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಇ-ಮೇಲ್ (Bomb Threat E-Mail) ಬಂದಿದೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರ ದೌಡಾಯಿಸಿದ್ದಾರೆ. ವಿಮಾನ ನಿಲ್ದಾಣದ ಎಲ್ಲ ಸ್ಥಳಗಳಲ್ಲಿ ಮತ್ತು ಪ್ರಯಾಣಿಕರ ಬ್ಯಾಗ್ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇನ್ನು ಇದೇ ರೀತಿಯಾಗಿ ಇದೇ ವರ್ಷ ಏಪ್ರಿಲ್ (April) 29ರಂದು ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ವಿಮಾನ ನಿಲ್ದಾಣದ ಮ್ಯಾನೇಜರ್ ಅವರ ಮೇಲ್ಗೆ ವಿಮಾನದಲ್ಲಿ ಟೈಂ ಬಾಂಬ್ ಇಡಲಾಗಿದೆ. ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು. ಜೊತೆಗೆ, ಟರ್ಮಿನಲ್ (Terminal) 1ರ ಒಳಗೆ ವಿವಿಧ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದೆ ಅಂತ ಸಂದೇಶ ನೀಡಿದ್ದರು.
ಇಂತಹದೇ ಕರೆಗಳು, ಇ-ಮೇಲ್ (E-Mails)ಗಳು ಮಂಗಳೂರು ವಿಮಾನ ನಿಲ್ದಾಣ, ದೆಹಲಿಯ ಮತ್ತೂ ಅಹಮದಾಬಾದ್‌ನ ಶಾಲೆಗಳಿಗೆ ಕೂಡಾ ಬಂದಿತ್ತು. ಇನ್ನು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಆದಾದ ಬಳಿಕವೂ ಕೆಲವು ಬಾರಿ ಹುಸಿ ಬಾಂಬ್ ದಾಳಿ ಕರೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಬಾಂಬ್ ಇರುವ ಕುರಿತು ಇ-ಮೇಲ್ ಬಂದಿರುವ ಕಾರಣ ಕಲಬುರಗಿ ವಿಮಾನ ನಿಲ್ದಾಣ (Kalburgi Airport)ದಲ್ಲಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ.