ಪ್ರಧಾನಿಗೆ ಸೂಕ್ತ ಭದ್ರತೆ ನೀಡದ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದ ಪಂಜಾಬ್ ಸರ್ಕಾರಕ್ಕೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ. ಹೀಗಾಗಿ ಪಂಜಾಬ್ ಸರ್ಕಾರವನ್ನು ಕೂಡಲೇ ಬರಖಾಸ್ತು ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. ಪಂಜಾಬ್ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತಾ ಲೋಪವಾಗಿರುವ ಕುರಿತು ಸುದ್ದಿದಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಪಂಜಾಬ್ ಗಡಿಯಲ್ಲಿ ಪಂಜಾಬ್ ಸರ್ಕಾರ ಪ್ರಧಾನಮಂತ್ರಿಗಳಿಗೆ ಭದ್ರತೆ ಕೊಡಲು ವಿಫಲವಾಗಿದೆ. ದೇಶದ ಪ್ರಧಾನಮಂತ್ರಿಗಳು ಮುಕ್ತವಾಗಿ ಓಡಾಡಲು ವ್ಯವಸ್ಥೆಗಳನ್ನು ಮಾಡಿಕೊಡದೇ ಇರುವುದು ಬಹುತೇಕವಾಗಿ ದೇಶದಲ್ಲಿ ಖಂಡನೆಯಾಗುತ್ತಿದೆ. ಇದೊಂದು ಖಂಡಾನಾರ್ಹ ವಿಚಾರ. ಪ್ರಧಾನಮಂತ್ರಿಗಳಿಗೆ ಗೌರವ ಕೊಡುವುದು ಎಲ್ಲ ಸರ್ಕಾರಗಳ ಕರ್ತವ್ಯ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮತ್ತು ಈ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .