ಬೆಂಗಳೂರು, ಫೆ. 25: ಇತ್ತೀಚೆಗಷ್ಟೇ ತೆರೆಕಂಡು ಚಿತ್ರರಸಿಕರನ್ನು ಆಕರ್ಷಿಸುತ್ತಿರುವ ಆ್ಯಕ್ಷನ್ ಪ್ರಿನ್ಸ್ ಅಭಿನಯದ “ಪೊಗರು” ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಧ್ರುವ ಸರ್ಜಾ, ಬೇಷರತ್ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ ಇಡೀ ಕುಟುಂಬ ಹನುಮಭಕ್ತರು, ಆಂಜನೇಯನ ಆಶಿರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತಾ ಗೌರವಿಸುತ್ತಾ ಬದುಕುತ್ತಿದ್ದೇವೆ. ತಾತನವರ ಕಾಲದಿಂದಲೂ ಹಿಂದುತ್ವದ ಪ್ರತಿಪಾದಕರಾಗಿಯೇ ಬದುಕುತ್ತಿದ್ದೇವೆ.
ಕಲೆಯೇ ಧರ್ಮ, ನಾವು ಎಲ್ಲಾ ಧರ್ಮಗಳನ್ನು ಗೌರವಿಸಿದ್ದೇವೆ. ಚಿತ್ರದ ಕಥೆ, ಪಾತ್ರ ಪೋಷಣೆಯಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದೆ ಎನ್ನುವಂತಹ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ. ಈ ಕಾರಣಕ್ಕಾಗಿ ಬೇಷರತ್ ಕ್ಷಮೆ ಕೇಳುತ್ತೇನೆ. ನಿಮಗೆ ಬೇಸರವಾಗಿರೋ ದೃಶ್ಯಗಳನ್ನು ಕತ್ತರಿಸಿದ್ದೇವೆ. ಮತ್ತೆ ಸೆನ್ಸಾರ್ ಆದ ಮೇಲೆ ನಿಮ್ಮೊಂದಿಗೆ ಮಾತಾಡೋಣ ಎಂದು ನಿರ್ಧರಿಸಿದ್ದೆ. ಈಗ ಅದನ್ನು ಸರಿಪಡಿಸಲು ತಂತ್ರಜ್ಞಾನ ತಂಡ ಸಿದ್ಧವಾಗಿದೆ. ನನ್ನ ಮನವಿಯನ್ನು ಪುರಸ್ಕರಿಸಿ ಎಂದಿನಂತೆ ನಿಮ್ಮ ಆಶಿರ್ವಾದವಿರಲಿ. ಜೈ ಹನುಮಾನ್, ಎಂದು ತಿಳಿಸಿದ್ದಾರೆ.
Jai Hanuman 🙏 pic.twitter.com/mqnrKkkjJH
— Dhruva Sarja (@DhruvaSarja) February 24, 2021