FIR Filed Against Union Minister HD Kumaraswamy: What is The Case?
ಬೆಂಗಳೂರು: ಕೇಂದ್ರ ಸಚಿವರಾಗಿರುವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಗಣಿ ಹಗರಣ ಪ್ರಕರಣದ ತನಿಖೆ ವಿಚಾರವಾಗಿ ಎಡಿಜಿಪಿ ಚಂದ್ರೇಶಖರ್ (ADGP Chandrashekar) ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಹೆಚ್ಡಿ ಕುಮಾರಸ್ವಾಮಿ ಅವರು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಚಂದ್ರಶೇಖರ್ ಅವರು ದೂರು ದಾಖಲಿಸಿದ್ದರು. ಬಿಎನ್ಎಸ್ ಅಂಡರ್ ಸೆಕ್ಷನ್ 224ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಹೆಚ್ಡಿ ಕುಮಾರಸ್ವಾಮಿ ಆರೋಪಿ ನಂಬರ್ 1 ಆಗಿದ್ದಾರೆ. ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆರೋಪಿ ನಂಬರ್ 2 ಆಗಿದ್ದಾರೆ. ಮತ್ತು ಜೆಡಿಎಸ್ ಮುಖಂಡ ಸುರೇಶ್ ಬಾಬು ಆರೋಪಿ ನಂಬರ್ 3 ಆಗಿದ್ದಾರೆ.
ಚಂದ್ರಶೇಖರ್ ಅವರು, ಆರೋಪಿಗಳು ದುರುದ್ದೇಶ ಪೂರಿತವಾಗಿ ಆರೋಪ ಮಾಡಿದ್ದಾರೆ. ಮತ್ತು ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯದ (ACMM Court) ಆದೇಶದಂತೆ ಎಫ್ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಸಾಯಿ ಮಿನರಲ್ಸ್ ಕಂಪನಿಗೆ (Sai Minerals Company) ನಿಯಮ ಉಲ್ಲಂಘನೆ ಮಾಡಿ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದ ಮೇಲೆ ಹೆಚ್ಡಿಕೆ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಚಂದ್ರಶೇಖರ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಇದಕ್ಕೆ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಹೇಗಾದರೂ ಮಾಡಿ ಒಮ್ಮೆಯಾದರೂ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಸಂಚು ಹೂಡಿದ್ದಾರೆ. ಅಧಿಕಾರಿ ಯಾವ ಹಿನ್ನೆಲೆಯಿಂದ ಬಂದವರು? ಅಕ್ರಮ ಹಣ ಸಂಪಾದನೆ ಮಾಡುವವರಿಗೆ ರಕ್ಷಣೆ ಕೊಡಿ ಎಂದು ನಿಮ್ಮನ್ನು ಐಪಿಎಸ್ ಆಫೀಸರ್ (IPS Officer) ಮಾಡಿದ್ದಾರಾ? ನಾನು ಬೇಲ್ ತಗೊಂಡೆ, ತನಿಖೆ ಮಾಡಬೇಡಿ ಎಂದು ಹೇಳಿಲ್ಲ. ನೀವು ಏನ್ ಮಾಡಿದ್ದೀರಿ? ನಿಮ್ಮ ವಿರುದ್ಧವೇ ಕೇಸ್ ಇದೆ, ಆರೋಪಿ ನಂಬರ್ 2. ಹೈಕೋರ್ಟ್ನಲ್ಲಿ ಅಧಿಕಾರಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು.
ಈ ಬಳಿಕ ಎಡಿಜಿಪಿ ಚಂದ್ರಶೇಖರ್ ತಮ್ಮ ಸಿಬ್ಬಂದಿಗೆ ಪತ್ರ ಬರೆದು, ಹೆಚ್ ಡಿ ಕುಮಾರಸ್ವಾಮಿ ಅವರು ನನ್ನ ಮೇಲೆ ಸಾಕಷ್ಟು ಸುಳ್ಳು ಆರೋಪ ಮಾಡಿದ್ದಾರೆ. ನಮ್ಮನ್ನು ಕುಗ್ಗಿಸುವ ಪ್ರಯತ್ನ ಮತ್ತು ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರೊಬ್ಬ ಆರೋಪಿ. ಇಂತಹ ಆರೋಪ ಮತ್ತು ಬೆದರಿಕೆಗಳಿಗೆ ನಾವು ನಿರಾಶೆಗೊಳ್ಳಬಾರದರು ಎಂದು ಪತ್ರದಲ್ಲಿ ಬರೆದಿದ್ದರು.