ಬೆಂಗಳೂರು, ಮೇ. 25: ಸುಪ್ರೀಂಕೋರ್ಟ್ ನಿರ್ದೇಶನ ಉಲ್ಲಂಘಿಸಿ ಯಾವುದೇ ಆಸ್ಪತ್ರೆ ಅಧಿಕ ಶುಲ್ಕ ಪಡೆಯುತ್ತಿದ್ದರೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಗಮನಕ್ಕೆ ತರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ “#CongressCares” ಹ್ಯಾಶ್ಟ್ಯಾಗ್ ಹೆಸರಿನಲ್ಲಿ ಟ್ವೀಟ್ ಮಾಡಿರುವ ಅವರು, ಕೋವಿಡ್ನಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಸ್ಪತ್ರೆಯ ಬಿಲ್ಲುಗಳೂ ಶಾಕ್ ನೀಡುತ್ತಿವೆ. ಮಾನ್ಯ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಹಲವು ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ. ಹೀಗಾಗಿ ಆಸ್ಪತ್ರೆಗಳ ಈ ಕೃತ್ಯ ಕೂಡಲೇ ಕೊನೆಯಾಗಬೇಕು. ಇಂತಹ ಸಮಸ್ಯೆ ಎದುರಿಸುತ್ತಿದ್ದರೆ ನನ್ನನ್ನು ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಟ್ಯಾಗ್ ಮಾಡಿ. ಕೂಡಲೇ ಆ ಕುರಿತು ಮಾಹಿತಿ ಪಡೆದು, ಸೂಕ್ತ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಎಂದಿದ್ದಾರೆ.
ಜನರಿಂದ ಅತ್ಯಧಿಕ ಶುಲ್ಕ ಪಡೆದು ಶೋಷಿಸುತ್ತಿರುವ ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆ ಒದಗಿಸುವವರನ್ನು ರಾಜ್ಯ ಸರ್ಕಾರ ಪೋಷಿಸುತ್ತಿದೆ. ಮನುಕುಲದ ಸಂಕಷ್ಟದ ಸಮಯದಲ್ಲಿ ಲಾಭ ಮಾಡಿಕೊಳ್ಳುವ ಮನಃಸ್ಥಿತಿಯು ಅಪರಾಧವಾಗಿದೆ. ಭರಿಸಲು ಅಸಾಧ್ಯವಾದ ವೈದ್ಯಕೀಯ ಶುಲ್ಕಗಳು ಹಾಗೂ ಬಡಜನರ ಸಂಕಷ್ಟ ನೋಡಲು ನೋವೆನಿಸುತ್ತದೆ ಎಂದರು.
ಜನರ ಸಂಕಷ್ಟದ ಜೊತೆಗೆ ವೈದ್ಯಕೀಯ ಶುಲ್ಕವೂ ಏರುತ್ತಿದೆ. ಈ ಕುರಿತು ಜಾಣಕುರುಡು ಪ್ರದರ್ಶಿಸುತ್ತಿರುವ ಬಿಜೆಪಿ ಸರ್ಕಾರ, ಜನರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ನಮಗನ್ನಿಸುತ್ತಿದೆ. ಆಸ್ಪತ್ರೆಗಳು ಆಮ್ಲಜನಕ, ಹಾಸಿಗೆ, ಕೋವಿಡ್ ಪರೀಕ್ಷೆ ಹಾಗೂ ಆಂಬುಲೆನ್ಸ್ಗಳಿಗೆ ಅಧಿಕ ಶುಲ್ಕ ಪಡೆಯುತ್ತಿರುವಾಗ ಮುಖ್ಯಮಂತ್ರಿಗಳು ಇದರ ಬಗ್ಗೆ ಮೌನವಹಿಸಿರುವುದು ದುರಂತವೇ ಸರಿ ಎಂದು ಟೀಕಿಸಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯಕ್ಕೆ ಮುಂದಾಗಬೇಕು. ಈ ಕುರಿತು ಹಲವು ದಿನಗಳಿಂದ ದೂರನ್ನು ಕೇಳುತ್ತಿದ್ದೆ, ಇದೀಗ ಕ್ರಮಕ್ಕೆ ಮುಂದಾಗಿದ್ದೇನೆ. ವೈದ್ಯಕೀಯ ಶುಲ್ಕ ಭರಿಸಲಾಗದೆ ಯಾರೂ ಕೂಡ ಜೀವ ಕಳೆದುಕೊಳ್ಳಬಾರದು. ಹೀಗಾಗಿ ಆಸ್ಪತ್ರೆಗಳಿಂದ ತೊಂದರೆಗೊಳಗಾದರೆ ಟ್ವಿಟರ್ನಲ್ಲಿ @DKShivakumar ಎಂದು ಟ್ಯಾಗ್ ಮಾಡಲು ತಿಳಿಸಿದ್ದಾರೆ.
ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿವೆ, ವೈದ್ಯಕೀಯ ಸೌಕರ್ಯಗಳಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರನ್ನು ಕಳೆದುಕೊಳ್ಳುತ್ತಿದ್ದೇವೆ. ಲಸಿಕೆಯನ್ನು ವಿತರಿಸುವ ನಮ್ಮ ಯೋಜನೆಗೆ ಅನುಮತಿ ನೀಡದ ಸರ್ಕಾರ ಜನರ ಜೀವವನ್ನು ಅಪಾಯದಂಚಿಗೆ ನೂಕುತ್ತಿದೆ.
ಕೊರೋನಾ ಪಿಡುಗು ಬಾಧಿಸುತ್ತಿರುವಾಗ ಅನೇಕ ವೈದ್ಯಕೀಯ ಸಂಸ್ಥೆಗಳು ಲಾಭದ ಉದ್ದೇಶದಿಂದ ಕೆಲಸ ಮಾಡುತ್ತಿವೆ. ಕೆಲವು ಪ್ರಕರಣದಲ್ಲಿ ಸರಿಯಾದ ಆರೈಕೆ ಕೊರತೆಯಿಂದ ಅನಾಹುತ ಆಗುತ್ತಿವೆ. ಹಲವು ವಿಶೇಷತೆಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕ, ಇದೀಗ ಒಂದೇ ದಿನದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರ ಸಾವನ್ನು ದಾಖಲಿಸಿರುವ ರಾಜ್ಯವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದವರು ಹೇಳಿದ್ದಾರೆ.
Unfortunate that people battling Covid are also bearing the brunt of exorbitant bills from hospitals brazenly violating Hon. SC rules.
— DK Shivakumar (@DKShivakumar) May 24, 2021
This has to be stopped. Anyone facing this,tag me on Twitter & Facebook, I shall ensure the matter is looked into & action taken.#CongressCares pic.twitter.com/na3w2b6l2J