ನನಗೆ ಮತ್ತೆ ಉತ್ತರಪ್ರದೇಶದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಮಂತ್ರಿ ಆಗೋ ಕನಸಿದೆ. ನನಗೆ ನೆಮ್ಮದಿಯ ಬದುಕು ಬೇಡ. ನನಗೆ ಹೋರಾಟದ ಬದುಕು ಬೇಕೆಂದು ಬಿಎಸ್‍ಪಿ(BSP) ಮುಖ್ಯಸ್ಥೆ ಮಾಯಾವತಿ(Mayavathi) ಹೇಳಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರನ್ನು ಔಪಚಾರಿಕವಾಗಿ ಭೇಟಿ ಮಾಡಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ರಾಷ್ಟ್ರಪತಿಯಾಗಲು ಬಯಸುತ್ತೇನೆ, ಹೀಗಾಗಿ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದೇನೆ ಎಂದು ಸಮಾಜವಾದಿ ಪಕ್ಷ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ಆದರೆ ನನಗೆ ರಾಷ್ಟ್ರಪತಿಯಾಗುವ ಆಸೆಯಿಲ್ಲ. ಬೇಕಿದ್ದರೆ ನಾನು ಮತ್ತೊಮ್ಮೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗುತ್ತೇನೆ ಅಥವಾ ದೇಶದ ಪ್ರಧಾನಿಯಾಗುತ್ತೇನೆ ಎಂದು ಹೇಳುವ ಮೂಲಕ ಅಖಿಲೇಶ್ ಯಾದವ್‍ಗೆ(Akhilesh Yadav) ಟಾಂಗ್ ನೀಡಿದ್ದಾರೆ.
ಸಮಾಜವಾದಿ ಪಕ್ಷ ನನ್ನನ್ನು ರಾಷ್ಟ್ರಪತಿಯಾಗಿರುವ ಕನಸು ಬೀಡಬೇಕು. ನನಗೆ ನೆಮ್ಮದಿಯ ಜೀವನ ಬೇಡ. ಹೋರಾಟವೇ ನನ್ನ ಉಸಿರು. ಹೀಗಾಗಿ ಹೋರಾಟದ ಬದುಕು ನನಗೆ ಬೇಕು. ಹೀಗಾಗಿಯೇ ನಾನು ಇಂದಿಗೂ ರಾಜಕೀಯದಲ್ಲಿದ್ದೇನೆ. ಇನ್ನು ನಾನು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನಿರ್ಮಿಸಲಾಗಿರುವ ಸ್ಮಾರಕಗಳನ್ನು ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ನಿರ್ಲಕ್ಷ್ಯ ಮಾಡುತ್ತಿವೆ. ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಮಾತನಾಡಲು ಮಿಶ್ರಾ ನೇತೃತ್ವದ ಬಿಎಸ್‍ಪಿ ನಿಯೋಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದೆ.

ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು. ಇನ್ನು ಉತ್ತರಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿಯಲು ಪರೋಕ್ಷವಾಗಿ ಸಮಾಜವಾದಿ ಪಕ್ಷವೇ ಕಾರಣ. ಸದ್ಯ ರಾಜ್ಯದಲ್ಲಿ ಮುಸ್ಲಿಮರು ಮತ್ತು ಇತರರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಸಮಾಜವಾದಿ ಪಕ್ಷ ನೇರ ಕಾರಣ ಎಂದು ಮಾಯಾವತಿ ಆರೋಪಿಸಿದರು.
ಇನ್ನು ವಿಧಾನಸಭಾ ಚುನಾವಣೆ ವೇಳೆ ಬಿಎಸ್‍ಪಿ ತನ್ನ ಮತದಾರರನ್ನು ಬಿಜೆಪಿಗೆ ವರ್ಗಾಯಿಸುವ ಮೂಲಕ ಬಹುಜನ ಸಮಾಜವಾದಿ ಪಕ್ಷ ಬಿಜೆಪಿ ಪರ ಕೆಲಸ ಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದರು.