ಕಮಲ ಪಾಳೆಯದ ಮೇಲೆ ಯಡಿಯೂರಪ್ಪ(Yeddurappa) ಸ್ಮೆಲ್ ಬಾಂಬ್ ಕಳೆದ ಶುಕ್ರವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yedurappa) ಅವರು ಮಾಡಿದ ಒಂದು ಘೋಷಣೆ ಬಿಜೆಪಿ(BJP) ಪಾಳೆಯವನ್ನು ಅಲುಗಾಡಿಸಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ(Vidhansabha Election) ತಮ್ಮ ಪುತ್ರ ವಿಜಯೇಂದ್ರ(Vijayendra) ಅವರು ಶಿಕಾರಿಪುರ(Shikaripura) ಕ್ಷೇತ್ರ ದಿಂದ ಸ್ಪರ್ಧಿಸುತ್ತಾರೆ ಎಂಬುದು ಯಡಿಯೂರಪ್ಪ ಅವರ ಘೋಷಣೆ.
ಅಂದ ಹಾಗೆ ಯಡಿಯೂರಪ್ಪ ಅವರ ಈ ಘೋಷಣೆ ಏಕಕಾಲಕ್ಕೆ ಹಲವು ಸಂದೇಶಗಳನ್ನು ರವಾನಿಸಿದೆ.
ಮೊದಲನೆಯದಾಗಿ ಇಂತಹ ಘೋಷಣೆಯ ಮೂಲಕ ಅವರು ಬಿಜೆಪಿ ಹೈಕಮಾಂಡ್ ತಮ್ಮ ಸುತ್ತ ಹೆಣೆಯಲು ಹೊರಟಿದ್ದ ಬಲೆಯನ್ನು ಹರಿದಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ನಂತರ ತಮ್ಮನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತು.
ತಮ್ಮ ಆಪ್ತರ ವಿರುದ್ಧ ನಡೆದ ಐಟಿ ದಾಳಿಯಿಂದ ಹಿಡಿದು, ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಚುನಾವಣೆಯ ಟಿಕೆಟ್ ನಿರಾಕರಿಸುವವರೆಗಿನ ಎಲ್ಲ ಬೆಳವಣಿಗೆಗಳು ಉದ್ದೇಶಪೂರ್ವಕವಾಗಿ ನಡೆದಿವೆ. ಆ ಮೂಲಕ ತಮ್ಮನ್ನು ನಿಯಂತ್ರಿಸುವ ಲೆಕ್ಕಾಚಾರ ಹೊಂದಿವೆ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತು.
ಹೀಗೆ ವರಿಷ್ಟರು ತಮ್ಮನ್ನು ಎರಡು ಕಾರಣಗಳಿಗಾಗಿ ನಿಯಂತ್ರಿಸಲು ಹೊರಟಿದ್ದಾರೆ. ಈ ಪೈಕಿ ಮೊದಲನೆಯದು, ತಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸುವುದು. ಎರಡನೆಯದಾಗಿ ತಾವು ಪಕ್ಷ ಬಿಟ್ಟು ಹೊರ ಹೋಗಬಾರದು ಎಂಬುದು ಯಡಿಯೂರಪ್ಪ ಅವರಿಗೆ ಅರ್ಥವಾಗಿದೆ.
ಯಾಕೆಂದರೆ ಮೋದಿ ಅಲೆಯ ಬಗ್ಗೆ ಅದೆಷ್ಟೇ ಪ್ರಚಾರ ನಡೆಯಲಿ, ಆದರೆ ಜಾತಿ ಕೇಂದ್ರಿತ ರಾಜಕಾರಣದ ತೆಕ್ಕೆಯೊಳಗಿರುವ ಕರ್ನಾಟಕವನ್ನು ವಶಪಡಿಸಿಕೊಳ್ಳುವುದು ಸುಲಭವಲ್ಲ. ಹಾಗಂತ ಕರ್ನಾಟಕವನ್ನು ಮರು ವಶಮಾಡಿಕೊಳ್ಳಲು ನಿಮ್ಮ ಬೆಂಬಲಬೇಕು ಅಂತ ಯಡಿಯೂರಪ್ಪ ಅವರೆದುರು ಗೋಗರೆಯಲು ಮೋದಿಯವರ ಪ್ರತಿಷ್ಟೆ ಬಿಡುವುದಿಲ್ಲ.
ಹಾಗಂತ ಯಡಿಯೂರಪ್ಪ ಅವರನ್ನು ಕಳೆದುಕೊಂಡು ಅಧಿಕಾರ ಹಿಡಿಯುವುದು ಅಸಾಧ್ಯ ಅಂತ ಮೋದಿ-ಅಮಿತ್ ಶಾ ಜೋಡಿಗೆ ಗೊತ್ತಿದೆ. ಹೀಗಾಗಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ಸೂತ್ರದಂತೆ ಯಡಿಯೂರಪ್ಪ ಅವರ ಜತೆ ವ್ಯವಹರಿಸುತ್ತಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ ಕರ್ನಾಟಕದ ನೂರಾ ಅರವತ್ತು ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಬೇಕು ಅಂತ ಬಿಜೆಪಿ ವರಿಷ್ಟರು ಈಗಾಗಲೇ ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ. ಈಗಿನಿಂದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಿ ಅಂತ ಗ್ರೀನ್ಸಿಗ್ನಲ್ ನೀಡಿದ್ದಾರೆ.
ಆದರೆ ವರುಣಾ ಇರಲಿ, ಇನ್ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ನೀವು ಒಪ್ಪಿಗೆ ಕೊಟ್ಟರೆ ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ಧುಮುಕುತ್ತೇನೆ ಅಂತ ವಿಜಯೇಂದ್ರ ಅವರು ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ(JP Nadda) ಅವರಿಗೆ ಕೆಲ ಕಾಲದ ಹಿಂದೆಯೇ ಹೇಳಿದ್ದಾರೆ.
ಆದರೆ ಈ ವಿಷಯದಲ್ಲಿ ವಿಜಯೇಂದ್ರ ಅವರಿಗೆ ಬಿಜೆಪಿ ಹೈಕಮಾಂಡ್ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಈ ಎಲ್ಲ ವಿಷಯಗಳನ್ನು ಯಡಿಯೂರಪ್ಪ ಗಮನಿಸುತ್ತಿದ್ದಾರಲ್ಲ? ಹೀಗಾಗಿ ಚುನಾವಣೆ ಒಂಭತ್ತು ತಿಂಗಳು ಬಾಕಿ ಇರುವಾಗಲೇ ತಮ್ಮ ಬತ್ತಳಿಕೆಯಿಂದ ಸ್ಮೆಲ್ ಬಾಂಬ್ ತೆಗೆದು ಬಿಜೆಪಿ ಪಾಳೆಯದ ಮೇಲೆ ಬಿಸಾಡಿದ್ದಾರೆ.
ಹೀಗೆ ಯಡಿಯೂರಪ್ಪ ಪ್ರಯೋಗಿಸಿದ ಸ್ಮೆಲ್ ಬಾಂಬಿಗೆ ಎರಡು ಗುರಿಗಳಿವೆ. ಮೊದಲನೆಯದು, ಈ ಬಾಂಬಿನ ಘಾಟಿಗೆ ಕಂಗಾಲಾಗಿ ಬಿಜೆಪಿ ಪಾಳೆಯ ತಮ್ಮನ್ನು ಓಲೈಸಬೇಕು. ಆ ಮೂಲಕ ಮುಂದಿನ ಚುನಾವಣೆಯ ನೇತೃತ್ವ ನಿಮ್ಮದೇ ಎನ್ನಬೇಕು. ಈ ಹಿಂದೆ ಜನತಾದಳ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇದೇ ರೀತಿಯ ಬಾಂಬು ಬಿಸಾಡಿದ್ದರು.
ಬಾಟ್ಲಿಂಗ್ ಹಗರಣದ ಆರೋಪ ತಮ್ಮ ನೆತ್ತಿಗೆ ಸುತ್ತಿಕೊಂಡಾಗ ರಾಜೀನಾಮೆ ನೀಡಿದ್ದರು. ಆದರೆ ಯಾವಾಗ ಅವರು ರಾಜೀನಾಮೆ ನೀಡಿದರೋ? ಆಗ ಪಕ್ಷದಲ್ಲಿದ್ದ ಅವರ ಬೆಂಬಲಿಗರು ಅತ್ತು ಕರೆದು ನಿಮ್ಮ ನಿರ್ಧಾರ ಬದಲಿಸಿ ಅಂತ ಹೆಗಡೆಯವರ ಮೇಲೆ ಒತ್ತಡ ಹೇರಿದರು.
ಈ ಒತ್ತಡ ಹೇಗಿತ್ತೆಂದರೆ ಜನತಾದಳಕ್ಕೆ ಹೆಗಡೆಯೊಬ್ಬರೇ ದಿಕ್ಕು ಎಂದು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿತ್ತು. ಆ ಮೂಲಕ ರಾಮಕೃಷ್ಣ ಹೆಗಡೆ ಇನ್ನಷ್ಟು ಶಕ್ತಿಯೊಂದಿಗೆ ಅಧಿಕಾರದಲ್ಲಿ ಮುಂದುವರಿದಿದ್ದರು. ಈಗ ಯಡಿಯೂರಪ್ಪ ಅವರು ಪ್ರಯೋಗಿಸಿದ ಸ್ಮೆಲ್ ಬಾಂಬಿಗೂ ಇದೇ ಘಾಟು ಇದೆ.