ಕೇಂದ್ರ ಸಚಿವ(Union Minister) ನಿತಿನ್ ಗಡ್ಕರಿ(Nithin Gadkari) ಅವರು ತಮ್ಮ ಮಾತಿನ ವೈಖರಿಯ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ನಾವು ಮಂತ್ರಿಗಳು, ಹಾಗಾಗಿ ಕಾನೂನು(Law) ಉಲ್ಲಂಘಿಸುವ ಹಕ್ಕು ನಮಗಿದೆ ಎಂದು ಹೇಳುವ ಮೂಲಕ ಜನರು ಹುಬ್ಬೇರಿಸುವಂತೆ ಮಾಡಿದರು. ಘಟನೆಯ ಹಿನ್ನೆಲೆ ಹೀಗಿದೆ.
ಮಹಾರಾಷ್ಟ್ರ(Maharashtra) ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಾಗ್ಪುರ(Nagpur) ಶಾಖೆಯಿಂದ ಬುಡಕಟ್ಟು ಜನಾಂಗದವರ ಆರೋಗ್ಯಕ್ಕಾಗಿ “ಬ್ಲಾಸಮ್” ಯೋಜನೆಯನ್ನು ಉದ್ಘಾಟಿಸಿ ಮಾತನಾಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಹೌದು ಸಾರ್’ ಎಂದು ಹೇಳುವ ಮೂಲಕ ಅಧಿಕಾರಿಗಳು ನಾವು ಹೇಳುವುದನ್ನು ಅನುಸರಿಸಬೇಕು. ಅಧಿಕಾರಿಗಳ ಹಿತದಿಂದ ಸರ್ಕಾರ ನಡೆಯುತ್ತಿಲ್ಲ, ಜನರ ಮತದಿಂದ ಆಡಳಿತ ನಡೆಯುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕೆಲವೊಮ್ಮೆ ಜನರ ಅನುಕೂಲಕ್ಕಾಗಿ ಕಾನೂನನ್ನು ಉಲ್ಲಂಘಿಸುವ ಹಕ್ಕು ನಮಗಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವರು, ಈ ಸಮಯದಲ್ಲಿ ಒಂದು ಘಟನೆಯನ್ನು ನೆನಪಿಸಿಕೊಂಡರು. 1995 ರಲ್ಲಿ ಮನೋಹರ ಜೋಶಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗಡ್ಚಿರೋಲಿ ಮತ್ತು ಮೇಲ್ಘಾಟ್‌ನಲ್ಲಿ ಅಪೌಷ್ಟಿಕತೆಯಿಂದ ಎರಡು ಸಾವಿರ ಬುಡಕಟ್ಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.
ಆಗ ಆ ಪ್ರದೇಶದಲ್ಲಿ 450 ಹಳ್ಳಿಗಳಿಗೆ ರಸ್ತೆ ಇರಲಿಲ್ಲ ಮತ್ತು ಅರಣ್ಯ ಇಲಾಖೆ ಕಾನೂನುಗಳು ರಸ್ತೆಗಳನ್ನು ನಿರ್ಮಿಸಲು ಅಡ್ಡಿಯಾಗುತ್ತಿದ್ದವು. ಹೀಗಾಗಿಯೇ ಅಲ್ಲಿ ರಸ್ತೆಗಳ ಅಭಿವೃದ್ಧಿಗೆ ತೊಡಕಾಗಿತ್ತು. ಇಂತಹ ಕಾನೂನುಗಳು ಇರುವುದರಿಂದಲೇ ಇಲ್ಲಿನ ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಸಾಧ್ಯವಾಗಿರಲಿಲ್ಲ ಎನ್ನುವ ಮೂಲಕ ಕಾನೂನು ಉಲ್ಲಂಘನೆಯ ಅಭಿಪ್ರಾಯ ವ್ಯಕ್ತಪಡಿಸಿದರು.
“ಆ ಸಮಯದಲ್ಲಿ ನಾನು ಈ ಸಮಸ್ಯೆಯನ್ನು ನನ್ನದೇ ಆದ ರೀತಿಯಲ್ಲಿ ಪರಿಹರಿಸಿದೆ.
ನೀವು ಹೇಳಿದಂತೆ ಸರ್ಕಾರ ಕೆಲಸ ಮಾಡುವುದಿಲ್ಲ ಎಂಬುದನ್ನು ಆಡಳಿತದಲ್ಲಿರುವ ಅಧಿಕಾರಿಗಳು ನೆನಪಿಟ್ಟುಕೊಳ್ಳಬೇಕು” ಎಂದು ನಿತಿನ್ ಗಡ್ಕರಿ ಇದೇ ವೇಳೆ ಅಧಿಕಾರಿಗಳಿಗೆ ಚಾಟಿ ಬೀಸಿದರು. ನಾವು ಹೇಳಿದಂತೆ ಸರ್ಕಾರ ಕೆಲಸ ಮಾಡುತ್ತದೆ, ನೀವು ‘ಹೌದು ಸಾರ್’ ಎಂದು ಹೇಳಿ, ನಾವು ನೀಡಿರುವ ಆದೇಶವನ್ನು ಪಾಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜನರ ಅಭಿವೃದ್ಧಿಗಾಗಿ ಕೆಲವೊಮ್ಮೆ ಕಾನೂನು ಉಲ್ಲಂಘನೆಯಾಗುತ್ತದೆ, ನಾವು ಹೇಳುವ ಯೋಜನೆಯನ್ನು ಅಧಿಕಾರಿಗಳು “ಹೌದು ಸರ್” ಎಂದು ಹೇಳಿ ಕಾರ್ಯರೂಪಕ್ಕೆ ತರಬೇಕು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.