ಹುಬ್ಬಳ್ಳಿ, ನ 2 : ಸಿಂದಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಾತ್ರಿಯಾಗಿದೆ. ಹತ್ತನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 17,450 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಒಂಬತ್ತೇ ಸುತ್ತಿನಲ್ಲಿ ಬಿಜೆಪಿಯ ರಮೇಶ ಭೂಸನೂರ-45640, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ-28190, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ-1607 ಮತಗಳನ್ನು ಪಡೆದಿದ್ದಾರೆ.
ಇದೇ ವೇಳೆ, ಹಾನಗಲ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಆರನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ ಬಿಜೆಪಿ 25746, ಕಾಂಗ್ರೆಸ್ 27244, ಜೆಡಿಎಸ್ 244 ಮತಗಳನ್ನು ಗಳಿಸಿದೆ. 1498 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಾನಗಲ್ ಮತ ಎಣಿಕೆಯಲ್ಲಿ ಮೊದಲೆರಡು ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಗಳಿಸಿತ್ತು. ಬಳಿಕ ನಿರಂತರವಾಗಿ ಕಾಂಗ್ರೆಸ್ ಮುನ್ನಡೆ ಗಳಿಸಿದ್ದು ಈಗ ಸ್ಪಷ್ಟ ಮುನ್ನಡೆ ಸಾಧಿಸಿದೆ. ಇಲ್ಲಿ ನಿಕಟ ಪೈಪೋಟಿ ಏರ್ಪಟ್ಟಿದ್ದು ಯಾವುದೇ ಪಕ್ಷ ಗೆದ್ದರೂ ಅಲ್ಪ ಅಂತರದಿಂದ ಎನ್ನುವುದು ಸ್ಪಷ್ಟವಾಗಿದೆ. ಬಿಜೆಪಿ ಇಲ್ಲಿ ಸೋತರೆ ರಾಜ್ಯ ಸರಕಾರಕ್ಕೆ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿಗೆ ಮುಖಭಂಗ ಆಗೋದಂತೂ ಸತ್ಯ.