ಇದೇನು ಒಂದು ಟೀಸರ್ ಕೊಂಡರೆ ಮತ್ತೊಂದು ಟೀಸರ್ ಉಚಿತವಿರಬಹುದೇ ಎನ್ನುವ ಸಂದೇಹ ಬೇಡ. ಯಾಕೆಂದರೆ ಈ ಚಿತ್ರದ ಶೀರ್ಷಿಕೆಯೇ ಹಾಗೆ.`ಬೈ ಒನ್ ಗೆಟ್ ಒನ್ ಫ್ರೀ’ ಎನ್ನುವುದರ ಸೂಚಕ. ಟೀಸರ್ ನೋಡಿದವರಿಗೆ ಮೇಲ್ನೋಟಕ್ಕೆ ಇಬ್ಬರು ಹುಡುಗರು ಒಂದೇ ಹುಡುಗಿಯನ್ನು ಪ್ರೀತಿಸುವ ಕತೆಯಂತೆ ಗೋಚರಿಸುತ್ತದೆ. ಅದೇ ಆ ಇಬ್ಬರನ್ನು ಕಂಡಾಗ ಒಬ್ಬನೇ ದ್ವಿಪಾತ್ರದಲ್ಲಿ ಕಾಣಿಸಿರಬಹುದೇ ಎನ್ನುವ ಸಂದೇಹ ಬಂದರೂ ಅಚ್ಚರಿ ಇಲ್ಲ. ಯಾಕೆಂದರೆ ಅವಳಿ ಸಹೋದರರು ನಾಯಕರಾಗಿರುವ ಚಿತ್ರ ಇದು. ಹಾಗಾಗಿ ಒಂದೇ ಸಿನಿಮಾದಲ್ಲಿ ಇಬ್ಬರು ನಾಯಕರನ್ನು ನೋಡಬಹುದಾದ ಈ ಸಿನಿಮಾ ನಿಜಕ್ಕೂ ಬೈ ಒನ್ ಗೆಟ್ ಒನ್ ಫ್ರೀ ಎನ್ನುವ ಶೀರ್ಷಿಕೆಗೆ ಬಹಳಷ್ಟು ಹೊಂದುತ್ತದೆ.
ಇದೊಂದು ಹೊಸಬರ ಪ್ರಯತ್ನ. ಆದರೆ ಟೀಸರ್ ನೋಡಿದ ಯಾರಿಗೂ ಹಾಗೆ ಅನಿಸದು. ನವ ನಿರ್ದೇಶಕ ಹರೀಶ್ ಅನಿಲಗಾಡ್ ನಿರ್ದೇಶನದಲ್ಲಿರುವ ಈ ಚಿತ್ರದಲ್ಲಿ ಮಧುಮಿಥುನ್ ಮತ್ತು ಮನು ಮಿಲನ್ ಎನ್ನುವ ಸಹೋದರರೇ ನಾಯಕರು. ತಾವೇ ದುಡ್ಡು ಹಾಕಿ ನಿರ್ಮಿಸಿರುವ ಚಿತ್ರದ ಟೀಸರ್ ಬಿಡುಗಡೆಯನ್ನು ತಮಗೆ ಅಭಿನಯ ತರಬೇತಿ ನೀಡಿದ ಗುರುಗಳಾದ ಉಷಾ ಭಂಡಾರಿಯವರ ಮೂಲಕ ಅನಾವರಣಗೊಳಿಸಿದರು. “ನಾಯಕರು ಮಾತ್ರವಲ್ಲ, ನಿರ್ದೇಶಕ ಕೂಡ ನಮ್ಮ ಸಂಸ್ಥೆಯಿಂದಲೇ ಬಂದವನು. ಈ ಸಿನಿಮಾದಲ್ಲಿ ಬಹಳಷ್ಟು ರಹಸ್ಯಗಳಿವೆ. ಅವುಗಳನ್ನು ಪರದೆಯ ಮೇಲೆ ನೋಡಿದವರು ಖಂಡಿತವಾಗಿ ಮೆಚ್ಚುತ್ತಾರೆ ಎನ್ನುವ ಭರವಸೆ ಇದೆ” ಎಂದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ `ಅಯೋಗ್ಯ’ ಖ್ಯಾತಿಯ ನಿರ್ದೇಶಕ ಮಹೇಶ್, “ಸಾಮಾನ್ಯವಾಗಿ ಒಬ್ಬ ಸಿನಿಮಾ ನಟನ ತಾಯಿಯಾಗುವುದೇ ಅಪರೂಪ. ಇವರ ತಾಯಿಗೆ ಒಮ್ಮೆಲೆ ಇಬ್ಬಿಬ್ಬರು ಕಲಾವಿದರ ತಾಯಿಯಾಗುವ ಯೋಗ ಬಂದಿದೆ. ಚಿತ್ರ ಬಿಡುಗಡೆಯ ಬಳಿಕ ಕೂಡ ಉತ್ತಮ ಹೆಸರು ಪಡೆಯುವಂತಾಗಲಿ” ಎಂದು ಹಾರೈಸಿದರು. ಸಮಾರಂಭದಲ್ಲಿ ನಾಯಕಿ ರೋಷನಿ ತೇಲ್ಕರ್ ಮತ್ತು ರಿಷಿತಾ ಮಲ್ನಾಡ್ ಉಪಸ್ಥಿತರಿದ್ದರು. ಗಾಯಕಿ ಶಮಿತಾ ಮಲ್ನಾಡ್, ಸಂಗೀತ ನಿರ್ದೇಶಕ ದಿನೇಶ್ ಕುಮಾರ್, ಅತೀತಿಯಾಗಿ ಆಗಮಿಸಿದ್ದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಮೊದಲಾದವರು ವೇದಿಕೆಯಲ್ಲಿದ್ದರು. ಚಿತ್ರಕ್ಕೆ ಅಭಿಷೇಕ್ ಮೃತ್ಯುಂಜಯ ಪಾಂಡೆ ಮತ್ತು ವಿಶ್ವಜಿತ್ ರಾವ್ ಛಾಯಾಗ್ರಹಣ ಇದೆ. ರಾಜಶೇಖರ್ ರಾವ್, ವಿಜಯೇಂದರ್, ಮುತ್ತು ಮತ್ತು ಶಿವು ಗೀತರಚನೆ ಮಾಡಿದ್ದಾರೆ. ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ಸಂಯೋಜನೆ ಇದೆ.