ಬೆಂಗಳೂರು ಡಿ 4 : ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಸಿ.ಆರ್. ಮನೋಹರ್ ಜೆಡಿಎಸ್ ತ್ಯಜಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನೋಹರ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣ ಮತ್ತು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಮನೋಹರ್ ಹೇಳಿದ್ದಾರೆ. ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಸಭಾಪತಿಗಳು ಮುಂದಿನ ಕ್ರಮಕ್ಕಾಗಿ ಕಾರ್ಯದರ್ಶಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಚಿತ್ರ ನಿರ್ಮಾಪಕರೂ ಆಗಿರುವ ಮನೋಹರ್, ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಜೆಡಿಎಸ್ ಎಂಎಲ್ ಸಿ ಆಗಿ ಮನೋಹರ್ ಆಯ್ಕೆಯಾಗಿದ್ದರು. ಬಳಿಕ ಸಿ.ಆರ್. ಮನೋಹರ್ ಜೆಡಿಎಸ್ ವರಿಷ್ಠರ ಜತೆ ಮುನಿಸಿಕೊಂಡಿದ್ದು, ಬಿಜೆಪಿ ಕಡೆ ಒಲವು ತೋರಿದ್ದರು. ಬೆಜೆಪಿ ಸೇರಲು ಯೋಚಿಸಿದ್ದ ಮನೋಹರ್‌ಗೆ, ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯ ಟಿಕೆಟ್ ಸಿಕ್ಕಿರಲಿಲ್ಲ. ಇದೀಗ ಅಸೆಂಬ್ಲಿ ಪ್ರವೇಶಿಸಲು ಕಣ್ಣಿಟ್ಟಿರುವ ಮನೋಹರ್, ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಡಿಸೆಂಬರ್ 2 ರಂದು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.