Bengaluru: ಜಾತಿ ಗಣತಿಗೆ ಸಂಬಂಧಿಸಿದ ಮೂಲ ವರದಿಯೇ ಕಾಣೆಯಾಗಿದ್ದು, ರಾಜ್ಯ ಸರ್ಕಾರದ ಮಹತ್ವದ ಜಾತಿ ಗಣತಿ (Caste Census) ವರದಿ ಅನುಷ್ಠಾನ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಸೀಲ್ಡ್ ಬಾಕ್ಸ್ನಲ್ಲಿದ್ದ ಮೂಲ ಪ್ರತಿ ಅಥವಾ ಹಸ್ತಪ್ರತಿ ಲಭ್ಯವಿಲ್ಲವೆಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash Hegde) ರಾಜ್ಯ ಸರ್ಕರಕ್ಕೆ ಪತ್ರ ಬರದಿದ್ದಾರೆ.

ಜಾತಿ ಗಣತಿ ವರದಿ ಜಾರಿಗೆ ಒಕ್ಕಲಿಗ ಮತ್ತು ಲಿಂಗಾಯತ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಮಧ್ಯೆಯೇ ಜಾತಿ ಗಣತಿ ವರದಿ ಮತ್ತೊಂದು ವಿವಾದಕ್ಕೆ ಸಿಲುಕುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಪತ್ರದಲ್ಲಿ ಏನಿದೆ?
“ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಗಣತಿ ವರದಿ)ಯನ್ನು 2021ರ ಆಗಸ್ಟ್ (August) 26 ರಂದು ಹಿಂದುಳಿದ ವರ್ಗಗಳ ಆಯೋಗ ಕಚೇರಿಯಲ್ಲಿ ಇರಿಸಲಾಗಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳು ಹಾಗೂ ಇತರ ವಿವರಗಳನ್ನೊಳಗೊಂಡ ಸೀಲ್ಡ್ ಬಾಕ್ಸ್‌ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮಹಜರ್ ನಡೆಸಿ 2021ರ ಅಕ್ಟೋಬರ್ (October) 5 ರಂದು ತೆರೆಯಲಾಗಿತ್ತು. ಆದರೆ ಮುದ್ರಿತ ಮುಖ್ಯವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇರುವುದಿಲ್ಲ.

ಇದರೊಂದಿಗೆ ಇದಕ್ಕೆ ಸಂಬಂಧಿಸಿದ ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಡ್ ಬಾಕ್ಸಿನಲ್ಲಿ (Sealed Box) ಲಭ್ಯವಿಲ್ಲ. ಹೀಗಾಗಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಛೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬಯಸುತ್ತಾ, ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ವಿಜಯಪುರ (Vijayapura) ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಅವರು, ಜಾತಿ ಗಣತಿ ವರದಿ ಕಾಣೆಯಾಗಿರುವ ಬಗ್ಗೆ ಟ್ವೀಟ್ ಮಾಡಿ “ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಜಾತಿ ಗಣತಿ ವರದಿಯ ಮೂಲ ಪ್ರತಿಯೇ ಇಲ್ಲ. ಇದರಲ್ಲಿ ಜವಾಬ್ದಾರಿಯ ಕೊರತೆ ಎದ್ದು ಕಾಣುತ್ತಿದ್ದು, ಇದರಲ್ಲಿ ಪಿತೂರಿ ಅಡಗಿದೆ. ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದ ಈ ದಾಖಲೆಯ ಸಿಂಧುತ್ವವು ಪ್ರಶ್ನಾರ್ಹವಾಗಿದೆ. ಇಂತಹ ಬೆಳವಣಿಗೆಗಳು ಗೌಪ್ಯವಾಗಿದ್ದರೂ ಸರಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರ ಉದ್ದೇಶಪೂರ್ವಕವಾಗಿ ಮಾಡಿದ ನಾಟಕ ಎನಿಸುತ್ತಿದೆ” ಎಂದು ಟ್ವೀಟ್ (Tweet) ಮಾಡಿದ್ದಾರೆ.
ಭವ್ಯಶ್ರೀ ಆರ್.ಜೆ