ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್- (Central Board of Secondary Education) ಸಿಬಿಎಸ್‌ಇ 2024-25ನೇ ಸಾಲಿನ 10ನೇ ತರಗತಿ ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆ (Board Exam) ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿದೆ. ಈಗಾಗಲೇ ಈ ಕುರಿತು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ (CBSE Official Website) ಅಲ್ಲಿ ಪ್ರಕಟವಾಗಿರುವ ಪ್ರಕಾರ 2024-2025ನೇ ಸಾಲಿನ ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು 15 ಫೆಬ್ರವರಿ 2025ರಿಂದ ಆರಂಭವಾಗಲಿವೆ. 10 ನೇ ತರಗತಿ ಬೋರ್ಡ್ ಪರೀಕ್ಷೆಯು ಮಾರ್ಚ್ 18, 2025 ರಂದು ಕೊನೆಗೊಳ್ಳುತ್ತದೆ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಯು ಏಪ್ರಿಲ್ 4, 2025 ರಂದು ಕೊನೆಗೊಳ್ಳುತ್ತದೆ.

ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ ಇದೇ ಮೊದಲ ಬಾರಿಗೆ ಸಿಬಿಎಸ್‌ಇ ಪರೀಕ್ಷಾ ಮಂಡಳಿಯು (CBSE Examination Board) ಪರೀಕ್ಷೆ ಆರಂಭವಾಗುವ ಕನಿಷ್ಠ 86ದಿನಗಳ ಮೊದಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.ಇದರಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ನಡೆಸಲು ಹೆಚ್ಚಿನ ಸಮಯಾವಕಾಶ ದೊರೆತಂತಾಗಿತ್ತು. ಈ ವರ್ಷ ದೇಶಾದ್ಯಂತ ಮತ್ತು 26 ರಾಜ್ಯಗಳ 8,000 ಶಾಲೆಗಳ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಬಿಎಸ್‌ಇ 10 ಮತ್ತು 12 ನೇ ಪರೀಕ್ಷೆಯಲ್ಲಿ ಹಾಜರಾಗಲಿದ್ದಾರೆ.
ಸಿಬಿಎಸ್‌ಇ ಮಂಡಳಿ ಪರೀಕ್ಷೆಗೆ ಮಾದರಿ ಪತ್ರಿಕೆಗಳು (Model papers) ಮತ್ತು ಹಿಂದಿನ ವರ್ಷದ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ, ವಿದ್ಯಾರ್ಥಿಗಳು ಖಂಡಿತವಾಗಿಯೂ ಅದನ್ನು ಅಭ್ಯಾಸ ಮಾಡಬೇಕು. ಇದು ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಮಾದರಿಯನ್ನು ತಿಳಿದುಕೊಳ್ಳಲು ಮಕ್ಕಳಿಗೆ ಸಹಾಯ ಮಾಡುತ್ತದೆ ಮತ್ತು ಅವರ ತಯಾರಿ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳ ಪ್ರಕಾರ ಮತ್ತು ಅವರ ಅಂಕಗಳ ಬಗ್ಗೆ ಮಾದರಿ ಪತ್ರಿಕೆಯಿಂದ ಮಾಹಿತಿಯನ್ನು ಪಡೆಯಬಹುದು.ಸಿಬಿಎಸ್‌ಇ ಬೋರ್ಡ್ (CBSE Board) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಶೇಕಡಾ 33 ಅಂಕಗಳನ್ನು ಪಡೆಯಬೇಕು. ಮತ್ತೊಂದೆಡೆ, ಒಬ್ಬ ವಿದ್ಯಾರ್ಥಿ 1 ಅಂಕದೊಂದಿಗೆ ಉತ್ತೀರ್ಣನಾಗಲು ಸಾಧ್ಯವಾಗದಿದ್ದರೆ, CBSE ಅವನಿಗೆ 1 ಗ್ರೇಸ್ ಮಾರ್ಕ್ ನೀಡಬಹುದು. 10ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಥಿಯರಿ ಮತ್ತು ಆಂತರಿಕ ಮೌಲ್ಯಮಾಪನ ಅಂಕಗಳನ್ನು ಒಟ್ಟುಗೂಡಿಸಿ ಉತ್ತೀರ್ಣರಾಗಲು ಶೇ. 33 ರಷ್ಟು ಅಂಕಗಳನ್ನು ಗಳಿಸಬೇಕು. ಆದರೆ 12 ನೇ ತರಗತಿಯಲ್ಲಿ, ವಿದ್ಯಾರ್ಥಿಗಳು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಪ್ರತ್ಯೇಕವಾಗಿ ಶೇ. 33 ಅಂಕಗಳನ್ನು ಪಡೆಯಬೇಕಾಗುತ್ತದೆ.