New Delhi: ಹಲವು ಕಾರ್ಪೊರೇಟ್ ಕಂಪನಿ (Corporate Company)ಗಳ ಲಾಭ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಉದ್ಯೋಗಿಗಳ ವೇತನ ಹೆಚ್ಚಿಸುತ್ತಿಲ್ಲ. ಹೊಸ ನೇಮಕಗಳನ್ನೂ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರ 2023-24ನೇ ಸಾಲಿನ ಹಣಕಾಸು ಸಮೀಕ್ಷೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದಿಂದ ಹೊಸ ಉದ್ಯೋಗ ಸೃಷ್ಟಿಯಾಗುವುದು ಕಷ್ಟ ಏಕೆಂದರೆ ನಿಯಮಿತ ಕೆಲಸಗಳಿಗೆ ಮಾತ್ರ ಉದ್ಯೋಗವನ್ನು ನೀಡಬಹುದು ಆದರೆ ಖಾಸಗಿ ವಲಯದಲ್ಲೇ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಾಧ್ಯ ಎಂದಿದೆ.

ಕಾರ್ಪೊರೇಟ್ ವಲಯದ ಹಣಕಾಸಿನ ಕಾರ್ಯಕ್ಷಮತೆ ಇದೀಗ ಉತ್ತಮವಾಗಿದೆ. 33,000ಕ್ಕೂ ಹೆಚ್ಚು ಕಂಪನಿಗಳ ಫಲಿತಾಂಶಗಳ ಸ್ಯಾಂಪಲ್ ನೋಡಿದಾಗ 2020ನೇ ಆರ್ಥಿಕ ವರ್ಷ ಮತ್ತು 2023ನೇ ಆರ್ಥಿಕ ವರ್ಷದ ನಡುವಿನ ಮೂರು ವರ್ಷಗಳಲ್ಲಿ ಭಾರತೀಯ ಕಾರ್ಪೊರೇಟ್ ವಲಯದ ತೆರಿಗೆ ಪೂರ್ವ ಲಾಭ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಾಗಿದೆ.
ಆದರೆ, ಇದಕ್ಕೆ ಹೋಲಿಸಿದರೆ ನೇಮಕಾತಿ ಮತ್ತು ಉದ್ಯೋಗಿಗಳ ವೇತನದಲ್ಲಿ ಹೆಚ್ಚೇನೂ ಏರಿಕೆ ಆಗುತ್ತಿಲ್ಲ .ಕಂಪನಿಗಳು ನೇಮಕಾತಿಯನ್ನು ಹೆಚ್ಚಿಸಲು ಹಾಗೂ ಉದ್ಯೋಗಿಗಳ ಕೊಡುಗೆಯನ್ನು ಹೆಚ್ಚಿಸಲು ಒತ್ತು ನೀಡಬೇಕು. ಲಾಭಕ್ಕೆ ತಕ್ಕಂತೆ ವೇತನವನ್ನು ಹೆಚ್ಚಿಸಬೇಕು.ಅದರ ಜೊತೆ ಜೊತೆಗೆ ನೇಮಕಾತಿಯನ್ನು ಕೂಡ ಹೆಚ್ಚಿಸದರೆ ಇನ್ನಷ್ಟು ಬೆಳವಣಿಗೆ ಸಾಧ್ಯ ಎಂದು ಕೇಂದ್ರ ಸರ್ಕಾರ ಎಂದು ಸಲಹೆ ನೀಡಿದೆ.

ಇನ್ನು ಭಾರತೀಯರ ಹೆಚ್ಚುತ್ತಿರುವ ಆಕಾಂಕ್ಷೆಗಳನ್ನು ಪೂರೈಸಲು ಹಾಗೂ 2047ರ ವೇಳೆಗೆ ವಿಕಸಿತ ಭಾರತದ ಪ್ರಯಾಣವನ್ನು ಪೂರ್ಣಗೊಳಿಸಲು ಕೇಂದ್ರ, ರಾಜ್ಯಗಳು ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಈಗಾಗಲೇ ಕೋವಿಡ್ (Covid) ಸಾಂಕ್ರಾಮಿಕದ ಕಾರಣದಿಂದ ಸಂಭವಿಸಿದ ಆರ್ಥಿಕ ಆಘಾತಗಳು ದೇಶದ ಉದ್ಯೋಗ ಪರಿಸರದ ಮೇಲೆ ಪ್ರಭಾವ ಬೀರಿವೆ. ನಿರ್ಮಾಣ ಹೊರತುಪಡಿಸಿದ 2022-23ರ ಕೃಷಿಯೇತರ ಅಸಂಘಟಿತ ಉದ್ಯಮಗಳ ವಾರ್ಷಿಕ ಸಮೀಕ್ಷೆ ಪ್ರಕಾರ ಈ ಉದ್ಯಮಗಳಲ್ಲಿನ ಒಟ್ಟಾರೆ ಉದ್ಯೋಗವು ಕುಸಿತ ಕಂಡಿದೆ.
2015-16ರಲ್ಲಿದ್ದ 11.1 ಕೋಟಿ ಉದ್ಯೋಗಕ್ಕೆ ಹೋಲಿಸಿದರೆ ಈ ವಲಯದ ಉದ್ಯೋಗಿಗಳ ಸಂಖ್ಯೆ 10.96 ಕೋಟಿಗೆ ಕುಸಿದಿದೆ. ಉತ್ಪಾದನೆ ವಲಯದಲ್ಲಿ ಕಾರ್ಮಿಕರ ಸಂಖ್ಯೆಯಲ್ಲಿ 54 ಲಕ್ಷ ಕಡಿತವಾಗಿದೆ. ಆದರೆ ವ್ಯಾಪಾರ ಮತ್ತು ಸೇವೆಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಒಟ್ಟಾರೆ ಕುಸಿತ ಅಷ್ಟಾಗಿ ಗಮನಕ್ಕೆ ಬಂದಿಲ್ಲ ಎಂದು ಸಮೀಕ್ಷೆಯು ತಿಳಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿಸುವ ಕಾರ್ಯ ನಡೆಯಬೇಕಿದೆ ಎಂದಿದೆ.