ಕೊಲಂಬೊ, ಜು. 30: ಶ್ರೀಲಂಕಾ ವಿರುದ್ಧದ ಸರಣಿ ಮುಗಿದ ಬಳಿಕವೂ ಟೀಂ ಇಂಡಿಯಾಕ್ಕೆ ಕೊರೊನಾ ಕಾಟ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಭಾರತ ತಂಡದ ಮತ್ತಿಬ್ಬರು ಆಟಗಾರರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಭಾರತ ತಂಡದ ಪ್ರಮುಖ ಬೌಲರ್ ಯುಜುವೇಂದ್ರ ಚಾಹಲ್ ಮತ್ತು ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ಅವರಿಗೆ ಕೋವಿಡ್ ಸೋಂಕು ದೃಢವಾಗಿದೆ. ಜು.27ರಂದು ಕೃನಾಲ್ ಪಾಂಡ್ಯಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಕೃನಾಲ್ ಪಾಂಡ್ಯ ಅವರ ಸಂಪರ್ಕದಲ್ಲಿದ್ದ 9 ಮಂದಿ ಆಟಗಾರರನ್ನು ಪ್ರತ್ಯೇಕಿಸಲಾಗಿತ್ತು.
ಈ ವೇಳೆ ಯುಜುವೇಂದ್ರ ಚಹಲ್ ಮತ್ತು ಕೃಷ್ಣಪ್ಪ ಗೌತಮ್ ಕೂಡಾ ಐಸೋಲೇಶನ್ ಗೆ ಒಳಗಾಗಿದ್ದರು. ಬಳಿಕ ಮತ್ತೆ ಅವರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಈ ಇಬ್ಬರ ವರದಿ ಪಾಸಿಟಿವ್ ಆಗಿದೆ.