ರಾಮಾಚಾರಿ ಎನ್ನುವ ಹೆಸರು ರವಿಚಂದ್ರನ್ ಚಿತ್ರದ್ದೇ ಆದರೂ ನಾಗರಹಾವು ಚಿತ್ರದ ರಾಮಾಚಾರಿ ಕೂಡ ಅಷ್ಟೇ ಜನಪ್ರಿಯ. ಒಟ್ಟಿನಲ್ಲಿ ರಾಮಾಚಾರಿ ಎಂದು ನಾಯಕನ ಪಾತ್ರಕ್ಕೆ ಹೆಸರು ಇರಿಸಿಕೊಂಡವರೆಲ್ಲ ಗೆದ್ದಿರುವುದನ್ನು ಕಂಡು ತಮ್ಮ ಚಿತ್ರಕ್ಕೂ ರಾಮಾಚಾರಿ ಎಂದು ಹೆಸರಿಟ್ಟಿದ್ದಾರೆ ತೇಜ್. ಅಂದಹಾಗೆ ಇವರು ಹೆಸರಿನ ಬಲದಿಂದ ಮಾತ್ರ ಗೆಲುವಿನ ನಿರೀಕ್ಷೆ ಮಾಡುತ್ತಿಲ್ಲ. ಬದಲಿಗೆ ತಮ್ಮ ಚಿತ್ರಕ್ಕೆ `ರಾಮಾಚಾರಿ 2.0′ ಎಂದು ಹೆಸರಿಡುವ ಮೂಲಕ ಪ್ರೇಕ್ಷಕರ ಬುದ್ಧಿವಂತಿಕೆಯ ಪರೀಕ್ಷೆ ಮಾಡಲಿದ್ದಾರೆ.
ಇತ್ತೀಚೆಗಷ್ಟೇ ಮಲ್ಲೇ ಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕರಾದ ಶಶಾಂಕ್, ಅಯೋಗ್ಯ ಮಹೇಶ್ ಮತ್ತು ಪ್ರವೀಣ್ ನಾಯಕ್ ಬಂದು ಚಿತ್ರಕ್ಕೆ ಶುಭ ಕೋರಿದರು. ಚಿತ್ರದ ನಾಯಕ ಮಾತ್ರವಲ್ಲದೆ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುತ್ತಿರುವ ತೇಜ್ ಅವರು ಮಾಧ್ಯಮದ ಜೊತೆಗೆ ಮಾತನಾಡಿ, “ಈ ರಾಮಾಚಾರಿ ತುಂಬ ಬುದ್ಧಿವಂತ. ಈ ಚಿತ್ರದಲ್ಲಿ ವಿಧಿಯೇ ಪ್ರಮುಖ ವಿಲನ್. ಅದು ನಾಯಕನ ಬದುಕಲ್ಲಿ ಹೇಗೆ ಆಟವಾಡುತ್ತದೆ? ಅದನ್ನು ನಾಯಕ ಹೇಗೆ ಎದುರಿಸುತ್ತಾನೆ ಎನ್ನುವುದೇ ಕತೆ” ಎಂದರು. ಅಂದಹಾಗೆ ಈ ರಾಮಾಚಾರಿಗೂ ಜೋಡಿಯಾಗಿ ಒಬ್ಬ ಮಾರ್ಗರೇಟ್ ಇದ್ದಾಳೆ. ಆ ಪಾತ್ರವನ್ನು ಕಿರುತೆರೆ ಖ್ಯಾತಿಯ ಶಿಲ್ಪಾ ಶೆಟ್ಟಿ ಅಭಿನಯಿಸಿದ್ದಾರೆ. ಈ ಪಾತ್ರ ದೊರಕಿರುವುದು ನನ್ನ ಅದೃಷ್ಟ. ಖುಷಿ ಮತ್ತು ಅಷ್ಟೇ ಆತಂಕ ಕೂಡ ಇದೆ ಎಂದು ಅವರು ಹೇಳಿದರು. ಚಿತ್ರದಲ್ಲಿ ಜಲೀಲ ಎನ್ನುವ ಪಾತ್ರವೂ ಇದ್ದು, ಅದನ್ನು ವಿಜಯ್ ಚೆಂಡೂರ್ ಅವರು ಅಭಿನಯಿಸಲಿದ್ದಾರೆ.
ಚಿತ್ರದಲ್ಲಿ ಇನ್ನೊಂದಷ್ಟು ಪ್ರಮುಖ ಪಾತ್ರಗಳನ್ನು ನಿಭಾಯಿಸಲಿರುವ ಸಂದೀಪ್ ಮಲಾನಿ, ಪ್ರಭು ಸೂರ್ಯ, ಅಶ್ವಿನ್ ಹಾಸನ್, ಕೃಷ್ಣಮೂರ್ತಿ ಕವತ್ತಾರ್ ಮೊದಲಾದವರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಅಂದಹಾಗೆ ಚಿತ್ರದಲ್ಲಿ ನಂದಿನಿ ಎನ್ನುವ ಮತ್ತೋರ್ವ ನಾಯಕಿ ಪಾತ್ರವೂ ಇದ್ದು ಅದಕ್ಕೆ ನಟಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ ಎಂದು ತೇಜ್ ತಿಳಿಸಿದರು. ಸ್ಪರ್ಶ ರೇಖಾ ಅವರು ಕೂಡ ಚಿತ್ರದಲ್ಲಿ ಒಂದು ಪಾತ್ರವನ್ನು ನಿಭಾಯಿಸಲಿರುವುದಾಗಿ ತಿಳಿದು ಬಂದಿದೆ. ಬಹುತೇಕ ಹಳ್ಳಿ ಪರಿಸರವನ್ನೇ ಕೇಂದ್ರಕರಿಸಿ ಚಿತ್ರದ ಶೂಟಿಂಗ್ ನಡೆಯಲಿದ್ದು, ದೇವನಹಳ್ಳಿ, ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತಲಿನ ಲೊಕೇಶನ್ ನಿಗದಿಯಾಗಿದೆ.