Bengaluru: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಚಿರತೆಯೊಂದು ಸಿಂಗಸಂದ್ರ ಬಳಿ ಪ್ರತ್ಯಕ್ಷವಾಗಿದ್ದು, ಬೊಮ್ಮನಹಳ್ಳಿ (Bommanahalli), ಎಚ್.ಎಸ್.ಆರ್ ಲೇಔಟ್, ಬಿ.ಟಿ.ಎಮ್ ಲೇಔಟ್ (BTM Layout) ನಿವಾಸಿಗಳಲ್ಲಿ ಆತಂಕ ಆವರಿಸಿದೆ. ಸಾರ್ವಜನಿಕರು ಒಬ್ಬೊಬ್ಬರೇ ಓಡಾಡದಂತೆ ಅರಣ್ಯ ಇಲಾಖೆ ಸೂಚನೆ ನೀಡಿದ್ದು, ರಾತ್ರಿ ವೇಳೆ ಓಡಾಡಬೇಡಿ ಅನಿವಾರ್ಯವಿದ್ದಲ್ಲಿ ಕಾರಿನಲ್ಲಿ ಓಡಾಡಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೆ.ಆರ್.ಪುರಂ (K R Puram) ಅರಣ್ಯಾಧಿಕಾರಿಗಳು ಚಿರತೆಗಾಗಿ ಸಿಂಗಸಂದ್ರ ಲೇಔಟ್ನಲ್ಲಿ ಪರಿಶೀಲನೆ ನಡೆಸುತ್ತಿದ್ದು, ದಾಮೊದರ್ ರೆಡ್ಡಿ (Damodhar Reddy) ಎಂಬುವವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು, ಬೀದಿ ನಾಯಿಗಳು ಚಿರತೆಯನ್ನು ನೋಡಿ ಅದನ್ನು ಓಡಿಸಿಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಚಿರತೆ (Cheetah) ನೋಡಿದ ನಿವಾಸಿಗಳು ಆತಂಕದಲ್ಲೇ ಮನೆಯಲ್ಲಿ ಬಚ್ಚಿಟ್ಟುಕೊಳ್ಳುವಂತಾಗಿದ್ದು, ಇದೀಗ ನಿದ್ದೆಗೆಡಿಸಿದ ಚಿರತೆ ಸೆರೆಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ. ಗಾಬರಿಪಡುವ ಅಗತ್ಯವಿಲ್ಲ, ಶನಿವಾರ ರಾತ್ರಿ ತಂಡವನ್ನು ಕಳುಹಿಸಿದ್ದೇವೆ ಮತ್ತು ಇಂದು ಕೆಲವು ಸಿಬ್ಬಂದಿಯನ್ನು ಕಳುಹಿಸಿ ಚಿರತೆ ಹುಡುಕಿಸಲಾಗುತ್ತಿದೆ.
ಚಿರತೆಯ ಸುಳಿವು ಸಿಕ್ಕಿಲ್ಲ ಮತ್ತು ಅಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇವೆ ಎಂದು ಬೆಂಗಳೂರು ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿ ಎನ್ ರವೀಂದ್ರ ಕುಮಾರ್ (N Ravindra Kumar) ಅವರು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು (Parappana Agrahara) ಕೂಡ ಚಿರತೆ ಕಾಣಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಹೊರವಲಯದಲ್ಲಿ ಚಿರತೆ ಓಡಾಡಿದ ಅನೇಕ ದೃಶ್ಯಗಳು ಕಂಡುಬಂದಿದ್ದವು.
ಭವ್ಯಶ್ರೀ ಆರ್.ಜೆ