Bengaluru: ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ (Prajwal Revanna Sex Scandal Case) ನಂತರ ರಾಜಕೀಯ ನಾಯಕರ ನಡುವೆ ಆರೋಪ, ಪ್ರತ್ಯಾರೋಪ ಶುರುವಾಗಿದ್ದು, ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರ ವಿರುದ್ಧ 100ಕೋಟಿ ಆಫರ್ ನೀಡಿದ್ದಾರೆ ಎಂಬ ಆರೋಪ ಸಾಬೀತು ಮಾಡಿದರೆ ಬೇಷರತ್ ಕ್ಷಮೆಯಾಚಿಸುತ್ತೇನೆ ಎಂದು ಸಚಿವ ಚೆಲುವರಾಯಸ್ವಾಮಿ (Cheluvarayaswamy) ಸವಾಲು ಹಾಕಿದ್ದಾರೆ.

ಯಾರೋ ಏನೋ ಹೇಳ್ತಾರೆ. ಅದಕ್ಕೆ ನಾವು ರಿಯಾಕ್ಷನ್ ಕೊಡುವುದಕ್ಕೆ ಆಗುವುದಿಲ್ಲ. ಒಬ್ಬ ಅಪರಾಧಿ ಏನೋ ಹೇಳಿದ್ರೆ ಎಲ್ಲರೂ ಕೇಳೋದು ಎಷ್ಟು ಸರಿ? ಅವರೇ ಒಂದು ವಿಡಿಯೋ ಲೀಕ್ ಮಾಡುತ್ತಾರೆ. ಅವರೇ ಅದಕ್ಕೆ ಕಾಮೆಂಟ್ ಹಾಕ್ತಾರೆ. ದೇವರಾಜೇಗೌಡ (Devarajegowda) ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು.
100 ಕೋಟಿ ಆಫರ್ ಕೊಟ್ಟಿದ್ರು ಎಂದು ಆರೋಪ ಮಾಡಿದರೆ ಹೇಗೆ? ವರ್ಷದ ಹಿಂದೆ ಇದೇ ದೇವರಾಜ ಏನು ಹೇಳಿದ್ದ, ರೇವಣ್ಣ ಕುಟುಂಬ ಡ್ಯಾಮೇಜ್ ಮಾಡಬೇಕು ಅಂದಿದ್ದ. ಆತನಿಗೆ ಪೆನ್ ಡ್ರೈವ್ (Pendrive) ಸಿಕ್ಕ ಮೇಲೆ ಕೋರ್ಟ್ ಗೆ ಕೊಡಬೇಕಿತ್ತು. ಒಂದು ವರ್ಷ ಇಟ್ಕೊಂಡಿದ್ದಕ್ಕೆ ನೀವು ಏನು ಹೇಳುತ್ತಿರಿ? ಎಂದು ಪ್ರಶ್ನಿಸಿದರು.
ಅಪರಾಧಿಗೆ ಲೊಗೋ ಹಿಡಿಯೋದು, ಏನು ಸಮಾಚಾರ ಅಂತ ಕೇಳೋದು ಎಷ್ಟು ಸರಿ? ರೇವಣ್ಣ ಕುಟುಂಬದ ಮೇಲೆ ನಮಗೆ ದ್ವೇಷ ಇತ್ತಾ? ನಾವು ರಾಜಕೀಯ ಲಾಭ ಮಾಡಿಕೊಳ್ಳುವುದಾದರೆ ಬೇರೆ ಸಂದರ್ಭದಲ್ಲಿ ಲೀಕ್ ಮಾಡಿಸಬಹುದಿತ್ತು. ಆದರೆ ಈ ಪೆನ್‌ಡ್ರೈವ್ ಚುನಾವಣೆ ಮುನ್ನಾದಿನ ಲೀಕ್ ಆಗಿರೋದು. ಇಂತಹ ವಿಚಾರ ಯಾರೂ ಕೂಡ ರಾಜಕೀಯ ಲಾಭವನ್ನು ಪಡೆದುಕೊಳ್ಳುವುದಿಲ್ಲ ಎಂದರು.

ಹಾಸನ (Hassan) ಪೆನ್‌ಡ್ರೈವ್ ಪ್ರಕರಣವನ್ನು ಡೈವರ್ಟ್ ಮಾಡುವುದು ಸರಿಯಲ್ಲ. ಹಾಸನದಲ್ಲಿ ಎಷ್ಟು ಕುಟುಂಬ ಬೀದಿಗೆ ತಂದಿದ್ದಾರೆ. ಅವರ ವಿರುದ್ಧ ಮೊದಲು ಕ್ರಮ ಆಗಬೇಕು. ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಮೊದಲು ಶರಣಾಗುವಂತೆ ಸೂಚನೆ ಕೊಡಬೇಕಿತ್ತು. ಯಾಕೆ ಇನ್ನೂ ಸರೆಂಡರ್ ಮಾಡಿಸಿಲ್ಲ? ಇದರ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದರು.
ನನಗೆ ದೇವರಾಜೇಗೌಡ ಯಾರು ಅನ್ನೋದು ಗೊತ್ತಿಲ್ಲ. ಇವತ್ತಿಗೂ ನಮಗೆ ಸಂಪರ್ಕ ಇಲ್ಲ. ಇಂತ ವ್ಯಕ್ತಿ ನಮ್ಮಮೇಲೆ ಆರೋಪ ಮಾಡ್ತಾನೆ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಗೌರವದ ವಿಚಾರ. ಮೊದಲು ಪ್ರಜ್ವಲ್ ರೇವಣ್ಣ (Prajwal Revanna) ಕರೆಸಬೇಕು. ತನಿಖೆಗೆ ಅವರು ಸಹಕಾರ ಮಾಡಿಕೊಡಬೇಕು ಎಂದರು.
ಡಿಕೆಶಿ ಜೊತೆ ದೇವರಾಜೇಗೌಡ ಮಾತುಕತೆ ವಿಚಾರವಾಗಿ, ಅವರ ಜೊತೆ ಮಾತನಾಡಿದ್ರೂ ಒಪ್ಪಲ್ಲ. ಡಿ.ಕೆ ಶಿವಕುಮಾರ್ (D.K Shivakumar) ಇರುವವರು. ಕೆಲವು ಮಾಹಿತಿ ಕೊಡೋಕೆ ಮಾಡಿರಬಹುದು. ಅದಕ್ಕೆ ಅವರು ಮಾತನಾಡುವ ಪ್ರಯತ್ನ ಮಾಡಿರಬಹುದು. ಏನೋ ಮಾಹಿತಿ ಕೊಡಲು ಬಂದಿದ್ದಾರೆಂದು ಮಾಡಿರಬಹುದು ಎಂದರು.
ಶಿವರಾಮೇಗೌಡ (Shivaramegowda) ನಮ್ಮ ಪಕ್ಷದಲ್ಲಿಲ್ಲ. ನಾನು ಅವರ ವಿರುದ್ಧ ಹೋರಾಟ ಮಾಡಿ ಬಂದವನು ಎಂದ ಅವರು, ಈ ಪ್ರಕರಣ ಒಕ್ಕಲಿಗ ನಾಯಕತ್ವದ ಪೈಪೋಟಿ ಇಲ್ಲ. ಮಳೆ ಬರಲಿ ಜನ ನೆಮ್ಮದಿಯಾಗಿರಲಿ ಅಂತೇವೆ. ನಾವು ಅದರ ಕಡೆ ಗಮನ ಕೊಟ್ಟಿದ್ದೇವೆ. ಅಧಿಕಾರಿಗಳ ಜೊತೆ ನಾವು ಸಂಪರ್ಕದಲ್ಲಿದ್ದೇವೆ.
ಇದರ ಬಗ್ಗೆ ನಾವ್ಯಾಕೆ ಹೆಚ್ಚು ತಲೆಕೆಡಿಸಿಕೊಳ್ಳೋಣ ಎಂದರು. ಈ ಪ್ರಕರಣ ಯಾರಿಗೂ ಗೌರವ ತರುವ ಪ್ರಕರಣವಲ್ಲ. ಬೆಳಗ್ಗೆದ್ದು ಇದನ್ನೇ ಚರ್ಚೆ ಮಾಡೋದು ಸರಿಯಲ್ಲ. ಕುಮಾರಸ್ವಾಮಿ (Kumaraswamy) ಪದೇ ಪದೇ ಯಾಕೆ ಇದನ್ನ ಹೇಳ್ತಾರೆ. ಮಾತು ಬಿಟ್ಟು ಪ್ರಜ್ವಲ್ ರೇವಣ್ಣ ಕರೆಸಲಿ. ರೇವಣ್ಣ (Revanna) ನಾವು ಬೇರೆ ಬೇರೆ ಅಂತಾರೆ. ನಮ್ಮ ಕುಟುಂಬ ಬೇರೆ ಅಂತಾರೆ. ಹಾಗಾದ್ರೆ ಪ್ರಜ್ವಲ್ ರೇವಣ್ಣ ಬೇರೆ ಬೇರೆನಾ?