ರಾಯಪುರ,ಜೂ.18: ಛತ್ತೀಸಗಡದ ಬಸ್ತಾರ್ ಜಿಲ್ಲೆಯ ಅರಣ್ಯದಲ್ಲಿ ಶುಕ್ರವಾರ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿ ಮಹಿಳಾ ನಕ್ಸಲ್ ಹತ್ಯೆ ಮಾಡಿದ್ದು, ಎಕೆ 47 ಬಂದೂಕು, ಎರಡು ಪಿಸ್ತೂಲ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ನಗದು ವಶಕ್ಕೆ ಪಡೆದಿವೆ.
ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಭದ್ರತಾ ಪಡೆಗಳ ಜಂಟಿ ತಂಡಗಳು ಹೊರಟಿದ್ದಾಗ, ಚಂಡಮೇಟಾ-ಪ್ಯಾರ್‌ಭಟ್ ಗ್ರಾಮಗಳ ದಟ್ಟಾರಣ್ಯದಲ್ಲಿ ನಕ್ಸಲರ ಇರುವಿಕೆಯ ಬಗ್ಗೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮಾಹಿತಿ ಲಭಿಸಿತು. ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆಯೇ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದು, ಭದ್ರತಾಪಡೆಗಳೂ ಪ್ರತಿದಾಳಿ ನಡೆಸಿವೆ. ಆಗ ಮಹಿಳಾ ನಕ್ಸಲ್ ಒಬ್ಬರು ಹತರಾಗಿದ್ದಾರೆ. ಮೃತ ಮಹಿಳಾ ನಕ್ಸಲ್ ಗುರುತು ಇನ್ನಷ್ಟೇ ಪತ್ತೆ ಆಗಬೇಕಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಬಸ್ತಾರ್ ಶ್ರೇಣಿ) ಸುಂದರರಾಜ್ ಪಿ. ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬಸ್ತಾರ್, ದಾಂತೇವಾಡಾ ಮತ್ತು ಸುಕ್ಮಾ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಘಟಕ ಮತ್ತು ಸಿಆರ್‌ಪಿಎಫ್ 80ನೇ ಬೆಟಾಲಿಯನ್‌ನ ಸಿಬ್ಬಂದಿ ಈ ಜಂಟಿ ಕಾರ್ಯಾಚರಣೆ ನಡೆಸಿದವು.