ಮೈಸೂರು, ಡಿ. 20: ಕ್ರಿಸ್‌ಮಸ್ ಹಬ್ಬದ ಸಡಗರ ಸಂಭ್ರಮಕ್ಕೆ ಕೊರೊನಾ ಬ್ರೇಕ್ ಹಾಕಿದೆ. ಈ ಬಾರಿಯ ಕ್ರಿಸ್ ಮಸ್ ಹಬ್ಬ ಸರಳವಾಗಿ ಆಚರಣೆಯಾಗುತ್ತದೆ. ಮೈಸೂರಿನ ಸುಪ್ರಸಿದ್ಧ ಸೇಂಟ್ ಫಿಲೋಮಿನಾ ಚರ್ಚ್ ನಲ್ಲಿ ಈ ಬಾರಿ ಸರಳ ಕ್ರಿಸ್ ಮಸ್ ಆಚರಣೆ ಮಾಡಲಾಗುತ್ತದೆ.
ಈ ಬಾರಿಯ ಕ್ರಿಸ್ ಮಸ್ ಕೇವಲ ಪ್ರಾರ್ಥನೆಗಷ್ಟೇ ಸೀಮಿತವಾಗಿರಲಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಮತ್ತು ಸ್ಯಾನಿಟೈಸರ್ ನ್ನು ಕಡ್ಡಾಯವಾಗಿ ಬಳಕೆ ಮಾಡಬೇಕಿದೆ.
ಕ್ರಿಸ್ ಮಸ್ ದಿನದಂದು ನಡೆಯುವ ಬಲಿ ಪೂಜೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಆದರೆ 10 ವರ್ಷದೊಳಗಿನ ಮಕ್ಕಳು 65 ವರ್ಷ ಮೇಲ್ಪಟ್ಟ ವೃದ್ದರಿಗೆ ಚರ್ಚ್ ಪ್ರವೇಶಕ್ಕೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಎಲ್ಲರಿಗೂ ದರ್ಶನಕ್ಕೆ ಅವಕಾಶ ಮಾಡಿ ಕೊಡಲು ಬಲಿ ಪೂಜೆ ಆನ್ಲೈನ್ ನಲ್ಲೂ ಲಭ್ಯವಿರುತ್ತದೆ.
ಕ್ರಿಸ್ ಮಸ್ ವೇಳೆ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬ್ರೇಕ್ ಹಾಕಲಾಗಿದೆ. ಬಲಿಪೂಜೆ ಸಂದರ್ಭದಲ್ಲಿ ಪ್ರವಾಸಿಗರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಮನೆಯಲ್ಲೆ ಕ್ರಿಸ್ ಮಸ್ ಆಚರಣೆಗೆ ಸೈಂಟ್ ಫಿಲೋಮಿನಾ ಚರ್ಚ್ ನ ಆಡಳಿತ ಮಂಡಳಿ ಮನವಿ.