ದಿಸ್ಪುರ, ಡಿ. 05: ಪ್ರೇಮಿಗಳ ದಿನಾಚರಣೆಗೆ ವಿರೋಧ ಹೊಂದಿರುವ ಭಜರಂಗದಳ ನಾಯಕರು ಇದೀಗ ಕ್ರಿಸ್ಮಸ್ ದಿನಾಚರಣೆಯ ದಿನದಂದು ಹಿಂದೂಗಳು ಚರ್ಚ್‌ಗೆ ಹೋಗುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಆ ದಿನ ಚರ್ಚ್‌ಗೆ ಹೋಗುವ ಹಿಂದೂಗಳನ್ನು ಥಳಿಸುವುದಾಗಿ ಅಸ್ಸಾಂನ ಕ್ಯಾಚರ್ ಜಿಲ್ಲೆಯ ಭಜರಂಗದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಹೇಳಿದ್ದಾರೆ.
ಅವರು ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಈ ರೀತಿಯ ಹೇಳಿಕೆಯನ್ನು ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ. ಮೇಘಾಲಯದ ಶಿಲ್ಲಾಂಗ್ನಲ್ಲಿ ವಿವೇಕಾನಂದರ ಕೇಂದ್ರವನ್ನು ಕ್ರಿಶ್ಚಿಯನ್ನರು ಮುಚ್ಚಿದ್ದಾರೆ. ಇದರಿಂದಾಗಿ ನಮಗೆ ನೋವಾಗಿದೆ. ಹಾಗಾಗಿ ಹಿಂದೂಗಳು ಕ್ರಿಸ್ಮಸ್ ದಿನದಂದು ಚರ್ಚ್‌ಗೆ ಹೋಗದಂತೆ ತಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.
ಕ್ರಿಸ್ಮಸ್ ದಿನ ಚರ್ಚ್‌ಗೆ ಹೋಗುವ ಹಿಂದೂಗಳನ್ನು ನಾವು ಥಳಿಸುತ್ತೇವೆ. ಮಾರನೇ ದಿನ ಅದು ಎಲ್ಲ ಮಾಧ್ಯಮಗಳಲ್ಲಿ ದೊಡ್ಡ ವರದಿಯಾಗುತ್ತದೆ. ನಮ್ಮನ್ನು ಗೂಂಡಾದಳ ಎಂದು ಬಿಂಬಿಸಲಾಗುತ್ತದೆ. ಆದರೆ ಅದು ನಮ್ಮ ಆದ್ಯತೆಯಲ್ಲ. ನಮ್ಮ ದೇವಾಲಯಗಳನ್ನು ಮುಚ್ಚುತ್ತಿರುವ ಅವರ ಧಾರ್ಮಿಕ ಕ್ಷೇತ್ರಕ್ಕೆ ನಾವು ಹೋಗಬಾರದು. ಹೋಗದಂತೆ ನಾವು ತಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.