ಕನ್ನಡ ಚಿತ್ರರಂಗದಲ್ಲಿ(Kannada Film Industry) ಪ್ರತಿವಾರವೂ ವಿಭಿನ್ನ ಕಥಾಹಂದರದ ಸಿನಿಮಾಗಳು ಸಿನಿಪ್ರೇಕ್ಷಕರ(Cinema Audience) ಮುಂದೆ ತಪ್ಪದೇ ಹಾಜರಾಗುತ್ತಿವೆ.
ಸದ್ಯ ಇದೇ ಸಾಲಿನಲ್ಲಿ ನಟ(Actor) ನೀನಾಸಂ ಸತೀಶ್(Ninasam Sathish)ಅವರ ಬಹುನಿರೀಕ್ಷಿತ ಸಿನಿಮಾ `ಪೆಟ್ರೋಮ್ಯಾಕ್ಸ್’(Petromax) ಈ ಹಿಂದೆಯೇ ತನ್ನ ಟ್ರೇಲರ್(Trailer) ಮುಖೇನ ಸಿನಿಪ್ರೇಕ್ಷಕರ ತಲೆಕಡಿಸಿತ್ತು!
ಅತೀಯಾದ ಡಬಲ್ ಮೀನಿಂಗ್, ಕೊಂಚ ಹಸಿ-ಬಿಸಿ ದೃಶ್ಯಗಳು ಪ್ರೇಕ್ಷಕರಿಗೆ ಈ ಸಿನಿಮಾದ ಕಥೆಯ ಮೂಲವೇನು?

ಇದು ಹಾಸ್ಯವೋ? ಡಬಲ್ ಮೀನಿಂಗ್ ಸಿನಿಮಾವೋ? ಹಸಿ-ಬಿಸಿ ದೃಶ್ಯಗಳನ್ನು ಒಳಗೊಂಡ ಸಿನಿಮಾವೋ? ಈ ಚಿತ್ರ ಯುವಕರಿಗೆ ಮಾತ್ರ ಸೀಮಿತವಾಗಿದೆಯೋ? ಅಥವಾ ಸಂದೇಶವೂ ಇದೆಯೋ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಇಂದಿನ ನನ್ನ ವಿಮರ್ಶೆ(Critic) ಎಳೆ ಎಳೆಯಾಗಿ ಉತ್ತರ ನೀಡಲಿದೆ.
ಪಂಪು ಹೊಡೆದು, ಬತ್ತಿ ಇಟ್ಟು ಪೆಟ್ರೋಮ್ಯಾಕ್ಸ್ ಹಚ್ಚಾಗಿದೆ…ಡಬಲ್ ಮೀನಿಂಗ್ ಕತ್ತಲೆಯೊಳಗೆ ಕಥೆ ಮುಗಿಯಲಿದೆಯೋ? ಅಥವಾ ಕತ್ತಲೆಯನ್ನು ಸಂದೇಶವೆಂಬ ಬೆಳಕು ಬೆಳಗಿದೆಯೋ? ತಿಳಿಯಲು ಹಾಗೇ ನಿಮ್ಮ ಓದುವ ಕುತೂಹಲವನ್ನು ಕೆರಳಿಸಿ….
ಕನ್ನಡ ಸಿನಿಮಾಗಳೇ ಹಾಗೇ ರೀ…..ವಿಭಿನ್ನ ಕಥೆ ಕೊಟ್ಟರೇ, ವಿಭಿನ್ನವಾಗಿ ಮಾತನಾಡುತ್ತಾರೆ. ಅದೇ ವಿಭಿನ್ನ ಕಥೆ ಕೊಡದೇ ಹೋದ್ರೆ, ಮತ್ತಷ್ಟು ವಿಭಿನ್ನವಾಗಿ ಮಾತನಾಡ್ತಾರೆ ನಮ್ಮ ಸಿನಿಪ್ರೇಕ್ಷಕರು.
ಅದಕ್ಕೇ ಬಲವಾದ ಕಾರಣವೂ ಇದೇ, ತಾವೂ ಕೊಟ್ಟ ಕಾಸಿಗೆ ಬೇಸರವಾಗಬಾರದು ಎಂಬ ಆಲೋಚನೆ ಪ್ರತಿಯೊಬ್ಬ ಸಿನಿಪ್ರೇಕ್ಷಕನದ್ದು, ಹಾಗಾಗಿಯೇ ನಿರೀಕ್ಷೆ ಮೂಡುವುದು ಸಹಜ! ಸದ್ಯ ಇದೇ ಅಂಕಿಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ(Director) ವಿಜಯ್ ಪ್ರಸಾದ್(Vijay Prasad) ಸಿನಿಪ್ರೇಕ್ಷಕರಿಗೆ `ಡಬಲ್’ ಧಮಾಕ ನೀಡಿದ್ದಾರೆ.

ಚಿತ್ರದ ಪ್ರಾರಂಭದಿಂದಲೇ ಡಬಲ್ ಮೀನಿಂಗ್ ಪದಗಳು ಪ್ರೇಕ್ಷಕನ ಕಿವಿಗೆ ನುಗ್ಗುತ್ತದೆ. ಈ ಜಗತ್ತಿನಲ್ಲಿ ಅನಾಥರು ಅಂದ್ರೆ ಯಾರು? ಮಾತು ಅಶ್ಲೀಲವೋ? ಮನಸ್ಸು ಅಶ್ಲೀಲವೋ? ಎಂಬುದನ್ನು ಮೂವರು ಹುಡುಗರು, ಒಬ್ಬಳು ಹುಡುಗಿಯ ಜೀವನದಿಂದ ಪ್ರೇಕ್ಷಕನಿಗೆ ತಿಳಿಸುವ ಪ್ರಯತ್ನ ಇಲ್ಲಿ ಅನಾವರಣಗೊಂಡಿದೆ.
ಹುಟ್ಟುತ್ತಲೇ ತಮ್ಮ ಪೋಷಕರು ಯಾರೆಂಬುದೇ ಗೊತ್ತಿಲ್ಲದೇ ಅನಾಥರಾಗಿ, ಅನಾಥಾಶ್ರಮದಲ್ಲಿ ಬೆಳೆದು ದೊಡ್ಡವರಾದ ಮೇಲೆ, ಈ ನಾಲ್ವರು ಇಡುವ ಹೆಜ್ಜೆಯೇ ಅಸಲಿ ಜೀವನ! ಮೂರು ಹುಡುಗರು, ಒಬ್ಬಳು ಹುಡುಗಿ ಇಂದಿನ ಸಮಾಜದಲ್ಲಿ ಒಂದೇ ಮನೆಯಲ್ಲಿರಲು ಬಯಸಿ, ಮನೆ ಬಾಡಿಗೆಗೆ ಕೇಳಿದಾಗ ಜನರ ದೃಷ್ಟಿಕೋನ, ಅಭಿಪ್ರಾಯಗಳನ್ನು ಇಲ್ಲಿ ಪ್ರಮುಖವಾಗಿ ತೋರಿಸಲಾಗಿದೆ.
ಜೀವನಕ್ಕಾಗಿ ಮುಖವಾಡ ಧರಿಸಿ ಹಲವು ಸ್ಥಿತಿಗತಿಗಳಲ್ಲಿ ಬದಕುವ ಜನರು, ಮುಖವಾಡ ಕಳಚಿದ್ರೆ ಎಲ್ಲವೂ ಅಶ್ಲೀಲವೇ ಎಂಬುದು ಅಶ್ಚರ್ಯಕರ! ಬದುಕಿನ ಭರವಸೆ, ಬೈತಲೆ, ಬೀಜ, ಒಗಟು ಬಿಡಿಸುವುದು, ಕಾಂಡೊಮ್, ಬ್ಯಾಟಿಂಗ್, ಬೋಲಿಂಗ್, ರತಿವಿಜ್ಞಾನ ಪದಗಳು ಸಿನಿಮಾದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿದ್ದು!
ಸಿನಿಪ್ರೇಕ್ಷಕರಿಗೆ ನಗಬೇಕೋ? ಅಥವಾ ನಗದೇ ಸಿನಿಮಾ ನೋಡಬೇಕೋ ಎಂಬ ಗೊಂದಲ ಕಾಡುವುದಂತೂ ನಿಜ. ಇನ್ನೂ ಕೆಲವರಿಗೆ ಸಿನಿಮಾ ಪೂರ ಡಬಲ್ ಮೀನಿಂಗ್ ಸಂಭಾಷಣೆಯಿಂದಲೇ ಕೂಡಿರುವುದರಿಂದ ಸಾಕಷ್ಟು ಮುಜುಗರ ತಂದಿದೆ.

ಉದಬತ್ತಿ ಶಿವಪ್ಪನಾಗಿ ಸತೀಶ್ ನೀನಾಸಂ ಕಾಣಿಸಿಕೊಂಡ್ರೆ, ಅಗರಬತ್ತಿ ಮಾದಪ್ಪನಾಗಿ ಅರುಣ್ ಕುಮಾರ್(Arun Kumar), ಕೃಷ್ಣಮೂರ್ತಿಯಾಗಿ ನಾಗಭೂಷಣ್(Dr Nagbhushan) ಹಾಗೂ ಕವಿತಾ ಕೃಷ್ಣಮೂರ್ತಿ ಪಾತ್ರದಲ್ಲಿ ನಟಿ ಕಾರುಣ್ಯ ರಾಮ್(Karunya Ram) ಅಭಿನಯಿಸಿದ್ದಾರೆ.
ಇನ್ನು`ಬೀಜ’ ಎಂಬ ಪದ ಬಳಸಿ, ಎಂಟ್ರಿ ಕೊಡುವ ನಟಿ ಹರಿಪ್ರಿಯಾ(Haripriya) ಮೀನಾಕ್ಷಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾದ ಕೊನೆಯವರೆಗೂ ಪ್ರತಿಯೊಬ್ಬರ ಪಾತ್ರವೂ ಒಂದೊಂದು ಪ್ರಸಂಗಗಳನ್ನು ವಿವರಿಸುತ್ತಾ ಹೋಗುತ್ತದೆ.
ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಸತೀಶ್ ನೀನಾಸಂ ಅವರ ಕನ್ನಡ ಉಚ್ಚಾರಣೆ, ಸ್ಪಷ್ಟತೆ ಸಿನಿಮಾಗೆ ಮತ್ತಷ್ಟು ಪುಷ್ಠಿ ನೀಡಿದೆ. ಸಿನಿಮಾದ ಮೊದಲಾರ್ಧ ಒಂದು ಕಥೆಯಾದ್ರೆ, ಎರಡನೇ ಭಾಗದಲ್ಲಿ ಇವರ ಪಯಣ ಎತ್ತ ಸಾಗುತ್ತದೆ ಎಂಬುದು ಮತ್ತೊಂದು ಕಥೆಯಾಗಿದೆ. ಈ ಸಿನಿಮಾದಲ್ಲಿ ಕಥೆಯನ್ನು ಪಾತ್ರಧಾರಿಗಳೇ ವಿವರಿಸುತ್ತ ಹೋಗುವುದು ವಿಶೇಷವಾಗಿದೆ.
ಭಾವನೆಗಳಿಗೆ ಸ್ಪಂದಿಸುವಿಕೆ, ಮನಸ್ಸುಗಳ ಹುಡುಕಾಟ, ನಿರೀಕ್ಷೆ ಮಾಡದ ಅನಿರೀಕ್ಷಿತ ಭೇಟಿ ಸಿನಿಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ. ಇನ್ನೇನು ಸಿನಿಮಾ ಕೊನೆಯ ಹಂತ ತಲುಪುತ್ತಿದ್ದಂತೆ ಸಿನಿಪ್ರೇಕ್ಷಕರಿಗೆ ಮೊದಲಾರ್ಧದಲ್ಲಿ ಇಷ್ಟೊಂದು ಅಶ್ಲೀಲ ಯಾಕೆ ಎಂದು ಕಾಡಿದ ಪ್ರಶ್ನೆಗೆ, ಕೊನೆಯ ಹಂತದಲ್ಲಿ ಉತ್ತರ ನೀಡಲಾಗಿದೆ.

ಸಿನಿಮಾದ ಹಿನ್ನೆಲೆ ಸಂಗೀತ ಕಥೆಗೆ ಒಂದೊಳ್ಳೆ ಸಾಥ್ ನೀಡಿದೆ. ಸಂಗೀತ ಕೊಡುಗೆಯನ್ನು ಅನೂಪ್ ಸೀಲಿನ್ ಕೊಟ್ಟಿರುವುದು ಉತ್ತಮವಾಗಿದೆ. ಒಟ್ಟಾರೆ ಪೆಟ್ರೋಮ್ಯಾಕ್ಸ್ ಸಿನಿಮಾ ಡಬಲ್ ಮೀನಿಂಗ್ನಿಂದಲೇ ಕೂಡಿದ್ದು, ನೋಡುವ ಪ್ರೇಕ್ಷಕರಿಗೆ ಇರಿಸು-ಮುರಿಸು ತಂದರೂ,
ಒಂದೊಳ್ಳೆ ಸಂದೇಶದ ಮೂಲಕ ಅಂತ್ಯ ಪಡೆಯುವುದು ಹಿತವೆನಿಸಿದೆ. ಅಸಲಿಗೆ `ಅಶ್ಲೀಲ’ ಅಂದ್ರೆ ಏನೂ? ಎಂಬುದನ್ನು ಪೆಟ್ರೋಮ್ಯಾಕ್ಸ್ ಸಿನಿಮಾ ನೋಡುವ ಮುಖೇನ ನೀವೇ ನಿರ್ಧರಿಸುವುದು ಒಳಿತು.

ಕನ್ನಡಿಗರಲ್ಲಿ ಮನವಿ : “ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಿ ವಿನಃ ಪೈರಸಿಯಲ್ಲಿ ಬಂದ ಲಿಂಕ್ ಅಥವಾ ಓಟಿಟಿ ರಿಲೀಸ್ಗೆ ಕಾಯಬೇಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುವ ಮೂಲಕ ಆಯಾ ಸಿನಿಮಾದ ನಟ, ನಟಿ, ತಂತ್ರಜ್ಞರು ಸೇರಿದಂತೆ ತೆರೆ ಹಿಂದಿನ ತಂತ್ರಜ್ಞರು, ಲೈಟ್ ಬಾಯ್ಸ್ ಎಲ್ಲರ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತೆಯೇ ಸರಿ”.
- ಮೋಹನ್ ಶೆಟ್ಟಿ