K.R Hospital in Mysore is in the stage of collapse. Officers can’t maintain one and only government hospital of palace city.
ಕುಸಿಯುತ್ತಿದೆ ಅರಮನೆ ನಗರಿಯ ಆಸ್ಪತ್ರೆ ಛಾವಣಿ! ಕೆ.ಆರ್ ಆಸ್ಪತ್ರೆಯ ದುಸ್ಥಿತಿಯನ್ನೊಮ್ಮೆ ನೋಡಿ
ಗೋಡೆಗಳು ಶಿಥಿಲಗೊಂಡಿವೆ, ಕುಡಿಯುವ ನೀರಿಲ್ಲ ಜನಪ್ರತಿನಿಧಿಗಳಿಗೆ ಕಣ್ಣಿಗೆ ಕಾಣಿಸುತ್ತಿಲ್ವಾ ಕೊಳಕು.
ಸಾಂಸ್ಕೃತಿಕ ನಗರಿ, ಮೈಸೂರಿನ ಹೃದಯ ಭಾಗದಲ್ಲಿರುವ ಏಕೈಕ ಸರ್ಕಾರಿ ಆಸ್ಪತ್ರೆಯೇ ಕೆಆರ್ ಆಸ್ಪತ್ರೆ. ಇದು ಬಡವರ ಆಸ್ಪತ್ರೆಯೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಮೈಸೂರು, ಮಂಡ್ಯ, ಮಡಿಕೇರಿ, ಚಾಮರಾಜನಗರ ಭಾಗದ ನೂರಾರು ಮಂದಿ ಬಂದು ಚಿಕಿತ್ಸೆ ಪಡೆಯುತ್ತಾರೆ. ಬಡವರ, ಮಧ್ಯಮದ ವರ್ಗದ ರೋಗಿಗಳಿಗೆ ಕೆ.ಆರ್ ಆಸ್ಪತ್ರೆ ಆಶಾಕಿರಣವಾಗಿದೆ. ಆದ್ರೆ ದುರಂತ ಏನು ಗೊತ್ತಾ? ಬಡವರ ರೋಗಗಳಿಗೆ ಔಷಧಿ ಕೊಟ್ಟು ಅವರ ಪ್ರಾಣ ಉಳಿಸೋ ಈ ಆಸ್ಪತ್ರೆಯೇ ಅವಸಾನದ ಅಂಚಿಗೆ ತಲುಪಿದೆ.
ಕುಸಿಯುತ್ತಿದೆ ಕೆ.ಆರ್ ಆಸ್ಪತ್ರೆ ಛಾವಣಿ: ಮಹಾರಾಜರ ಕಾಲದಲ್ಲಿ ನಿರ್ಮಿಸಲಾಗಿರುವ ಕೆ.ಆರ್ ಆಸ್ಲತ್ರೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಛಾವಣಿ ಮೇಲೆಲ್ಲಾ ಗಿಡಮರಗಂಟಿಗಳು ಬೆಳೆದು ಗೋಡೆಗಳೆಲ್ಲಾ ಬಿರುಕು ಬಿದ್ದಿವೆ. ಇದರಿಂದ ಕಟ್ಟಡ ಛಾವಣಿ ಸೋರುತ್ತಿದೆ. ಗೋಡೆಗಳೆಲ್ಲಾ ಶಿಥಿಲಗೊಂಡು ಕಟ್ಟಡವೇ ಕುಸಿದು ಬೀಳುವ ಆತಂಕ ಎದುರಾಗಿದೆ.
ಕುಡಿಯಲು ನೀರೂ ಇಲ್ಲ ! : ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ. ಕುಡಿಯುವ ನೀರಿನ ಫಿಲ್ಟರ್ ಎಲ್ಲಾ ಕಿತ್ತು ಹೋಗಿದೆ. ಅದರ ನಿರ್ವಹಣೆ ಮಾಡದೆ ಕಾಲಗಳೇ ಕಳೆದಿರಬೇಕು. ಆದ್ರೆ ನಿರ್ವಹಣೆಗೆ, ಕುಡಿಯುವ ನೀರಿನ ಫಿಲ್ಟರ್ ಖರೀದಿಗೆ ಬಿಲ್‌ಗಳು ಮಾತ್ರ ವರ್ಷ ವರ್ಷ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಲೇ ಇವೆ.
ರೋಗಿಗಳ ಸಂಬಂಧಿಕರಿಗೆ ಬೀದಿಯೇ ಗತಿ: ಕೆ.ಆರ್ ಆಸ್ಪತ್ರೆಗೆ ಸುತ್ತಮುತ್ತಲಿನ ನಾಲ್ಕು ಜಿಲ್ಲೆಗಳ ರೋಗಿಗಳಿ ಆಗಮಿಸುತ್ತಾರೆ. ಆದ್ರೆ ಈ ರೋಗಿಗಳ ಜೊತೆ ಬರೋ ಸಂಬಂಧಿಕರಿಗೆ ಉಳಿದುಕೊಳ್ಳಲು ಇಲ್ಲಿ ಸೂಕ್ತ ವ್ಯವಸ್ಥೆಯೇ ಇಲ್ಲ. ರೋಗಿಗಳ ಸಂಬಂಧಿಕರು ಆಸ್ಪತ್ರೆ ಆವರಣ ಅಥವಾ ಬೀದಿ ಬದಿಯಲ್ಲೇ ಮಲಗಬೇಕು. ಮಳೆಗಾಲದಲ್ಲಂತು ಇವರ ಪಾಡು ಹೇಳ ತೀರದು.
ಕೆಟ್ಟು ನಿಂತಿದೆ ಆಂಬುಲೆನ್ಸ್ !: ಇನ್ನು ಈ ಆಸ್ಪತ್ರೆಗೆ ರೋಗಿಗಳು ನಿರಂತರವಾಗಿ ಬರುತ್ತಲೇ ಇರುತ್ತಾರೆ. ಇವರನ್ನು ಕರೆತರಲು ಅಥವಾ ಕರೆದೊಯ್ಯಲು ಬೇಕಾಗಿರುವ ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ಈ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯವಹಿಸಿ ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದ್ದಾರೆ.
ಕೋಟಿ ಕೋಟಿ ಅನುದಾನ ಎಲ್ಲಿಗೆ ಹೋಯ್ತು?: ಕೆ.ಆರ್ ಆಸ್ಪತ್ರೆಯ ಮಹತ್ವವನ್ನ ಅರಿತಿರುವ ರಾಜ್ಯ ಸರ್ಕಾರಗಳು ಆಸ್ಪತ್ರೆಯ ದುರಸ್ಥಿತಿಗೆ ಸಿದ್ದರಾಮಯ್ಯ ಅವರ ಸರ್ಕಾರ ಹಾಗೂ ಕುಮಾರ ಸ್ವಾಮಿ ಅವರ ಆಳ್ವಿಕೆ ಕಾಲದಲ್ಲಿ ಕೊಟ್ಟಿಗಟ್ಟಲೆ ಹಣ ಬಿಡುಗಡೆ ಮಾಡಲಾಗಿತ್ತು. ಆದ್ರೆ ಆ ಹಣ ಎಲ್ಲಿಗೆ ಹೋಯಿತು ಅನ್ನೋ ಪ್ರಶ್ನೆ ಸಾರ್ವಜನಿಕರದ್ದು. ಕೋಟಿ ಹಣದಲ್ಲಿ ಪುನರುಜ್ಜೀವನಗೊಳ್ಳಬೇಕಾದ ಆಸ್ಪತ್ರೆ ಛಾವಣಿ, ಗೋಡೆಗಳ ಸ್ಥಿತಿ ಹದಗೆಡುತ್ತಲೇ ಇದೆ. ಇಡೀ ಆಸ್ಪತ್ರೆ ನಿರ್ವಹಣೆ ಇಲ್ಲದೆ ಇವತ್ತೋ, ನಾಳೆಯೋ ಕುಸಿಯುವ ಆತಂಕದಲ್ಲಿದೆ.
ಇಷ್ಟೊಂದು ಅವ್ಯವಸ್ಥೆ ಇರೋ ಕೆ.ಆರ್ ಆಸ್ಪತ್ರೆಯ ಬಗ್ಗೆ ಆರೋಗ್ಯ ಇಲಾಖೆಗೆ ಯಾಕೆ ನಿರ್ಲಕ್ಷ್ಯ? ಸರ್ಕಾರ ಕೋಟಿ ಕೋಟಿ ಅನುದಾನ ಕೊಟ್ರೂ ಆಸ್ಪತ್ರೆ ಪರಿಸ್ಥಿತಿ ಯಾಕೆ ಸುಧಾರಣೆಯಾಗ್ತಿಲ್ಲ? ಬಡವರ ಆಸ್ಪತ್ರೆ ಅಂತ ಹೆಸರು ಪಡೆದಿರೋ ಕೆ.ಆರ್ ಆಸ್ಪತ್ರೆ ಅವ್ಯವಸ್ಥೆ ಆರೋಗ್ಯ ಸಚಿವರಿಗೆ ಕಾಣಿಸುತ್ತಿಲ್ವಾ? ಈ ಸರ್ಕಾರಿ ಆಸ್ಪತ್ರೆಯನ್ನೂ ಮುಚ್ಚಿ ಖಾಸಗಿಯವರಿಗೆ ಅನುಕೂಲ ಮಾಡಿ ಕೊಡುವ ಹುನ್ನಾರವೇನಾದ್ರು ಇದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲೇ ಬೇಕು.