ಬೆಂಗಳೂರು,ಜೂ.28: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಹೈಕೋರ್ಟ್ ಸೇರಿದಂತೆ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸುತ್ತಿದ್ದು, ಇದರಿಂದ ನ್ಯಾಯಾಲಯಗಳಲ್ಲಿ ಇಂದಿನಿಂದ ಭೌತಿಕ ಕಲಾಪಗಳು ಮುಂದುವರಿಯಲಿವೆ.
ಈ ಸಂಬಂಧ ಹೈಕೋರ್ಟ್ ತನ್ನ ವಿವಿಧ ಪೀಠಗಳು ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ 25ರಂದು ಪ್ರತ್ಯೇಕವಾಗಿ ನೂತನ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಬಿಡುಗಡೆಗೊಳಿಸಿದೆ.
ಪ್ರತಿ ನ್ಯಾಯಾಲಯವು ಪ್ರತ್ಯೇಕ ದಾವೆ ಪಟ್ಟಿ ಸಿದ್ಧಪಡಿಸಿ, ದಿನಕ್ಕೆ 30 ಪ್ರಕರಣಗಳ ವಿಚಾರಣೆಗೆ ಮಾತ್ರವೇ ಆದ್ಯತೆ ನೀಡಬೇಕು. ಈ ವೇಳೆ ವಕೀಲರ ಅನುಪಸ್ಥಿತಿಯಲ್ಲಿ ಪ್ರಕರಣ ನಿರ್ಧರಿಸುವುದನ್ನು ನ್ಯಾಯಾಲಯಗಳು ತಡೆಯಬೇಕು. ಪ್ರತಿದಿನ ನ್ಯಾಯಾಲಯಗಳಿಗೆ ಐವರು ಸಾಕ್ಷಿಗಳನ್ನೂ ಮಾತ್ರ ಸಾಕ್ಷ್ಯ ದಾಖಲಿಸಿಕೊಳ್ಳಲು ಅವಕಾಶ ನೀಡಬೇಕು. ಸಾಕ್ಷಿಗಳನ್ನು ಭೌತಿಕವಾಗಿ ನ್ಯಾಯಾಲಯಕ್ಕೆ ಕರೆದು ದಾಖಲು ಮಾಡಿಕೊಳ್ಳಬಹುದು. ಒಂದು ವೇಳೆ ಆರೋಪಿಗಳು ಜೈಲಿನಲ್ಲಿದ್ದರೆ 1973ರ ಸಿಆರ್‌ಪಿಸಿ ಸೆಕ್ಷನ್ 313ರ ಅಡಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ಹೇಳಿಕೆಗಳನ್ನು ಪಡೆಯಬೇಕು ಎಂದು ಎಸ್‌ಒಪಿಯಲ್ಲಿ ಉಲ್ಲೇಖಿಸಿದೆ.