- ಮಚೈಲ್ ಮಾತಾ ಯಾತ್ರೆ ಸ್ಥಗಿತ – ಸುರಕ್ಷತಾ ಕ್ರಮಗಳಿಗೆ ಆದ್ಯತೆ
- ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳ ಭಾರಿ ಕಾರ್ಯಾಚರಣೆ
- ಮೃ*ರ ಕುಟುಂಬಗಳಿಗೆ ಸರ್ಕಾರದ ಸಂತಾಪ
Jammu and Kashmir: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್(Kishtwar) ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದ್ದು,
ಮಚೈಲ್ ಮಾತಾ ದೇವಾಲಯದ(Machayil Mata Temple) ಯಾತ್ರೆ ಮಾರ್ಗದಲ್ಲಿರುವ ಕೊನೆಯ ವಾಹನ ಸಂಚಾರ ಸಾಧ್ಯವಾದ ಗ್ರಾಮವಾದ ಚಸೋಟಿಯಲ್ಲಿ(Chasoti) ಗುರುವಾರ ಭೀಕರ ಮೇಘಸ್ಫೋಟ(Cloudburst) ನಡೆದಿದೆ.
ಈ ಆಕಸ್ಮಿಕ ಪ್ರಕೃತಿ ವಿಪತ್ತಿನಲ್ಲಿ ಕನಿಷ್ಠ 12 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇನ್ನೂ ಹಲವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಸಾ*ನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನು ಈ ಘಟನೆ ಮಚೈಲ್ ಮಾತಾ ವಾರ್ಷಿಕ ಯಾತ್ರೆಯ ಮಧ್ಯದಲ್ಲೇ ಸಂಭವಿಸಿದ್ದು, ಸುರಕ್ಷತಾ ಕಾರಣಗಳಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಗ್ರಾಮ ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದು, ಭಾರೀ ಪ್ರಮಾಣದಲ್ಲಿ ಮಣ್ಣು, ಕಲ್ಲು, ನೀರು ಒಂದೇ ಹೊತ್ತಿನಲ್ಲಿ ಹರಿದು ಬಂದು ಜನರ ಮನೆಗಳು, ರಸ್ತೆಗಳು ಹಾನಿಗೊಳಗಾಗಿವೆ.
ಅಧಿಕಾರಿಗಳು ತುರ್ತು ಕ್ರಮವಾಗಿ ಸಿವಿಲ್ ಡಿಫೆನ್ಸ್, ಪೊಲೀಸ್, ಸೇನೆ, ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ) ಹಾಗೂ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ) ತಂಡಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ದೊಡ್ಡ ಪ್ರಮಾಣದ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಆರಂಭವಾಗಿದ್ದು, ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ(Manoj Sinha) ತಮ್ಮ ಸಂತಾಪ ಸಂದೇಶದಲ್ಲಿ, “ಚಸೋಟಿ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದ ಸುದ್ದಿ ಕೇಳಿ ದುಃಖಿತನಾಗಿದ್ದೇನೆ.
ಮೃ*ರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ವೇಗಗೊಳಿಸಲು ಸಂಬಂಧಿತ ಎಲ್ಲಾ ಇಲಾಖೆಗೆ ನಿರ್ದೇಶನ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೂಡಾ ಈ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಕಿಶ್ತ್ವಾರ್ ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಶರ್ಮಾ(Pankaj Kumar Sharma) ಅವರೊಂದಿಗೆ
ನೇರವಾಗಿ ಮಾತನಾಡಿ ಸ್ಥಳೀಯ ಆಡಳಿತದ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. “ಚಸೋಟಿ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಹೆಚ್ಚಿನ ಜೀವಹಾನಿಯ ಆತಂಕವಿದೆ. ರಕ್ಷಣಾ ಪಡೆಗಳು ಈಗಾಗಲೇ ಸ್ಥಳಕ್ಕೆ ತೆರಳಿವೆ”
ಎಂದು ಅವರು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಬರೆದು ಕೊಂಡಿದ್ದಾರೆ ಕಿಶ್ತ್ವಾರ್ ಉಪ ಆಯುಕ್ತ ಪಂಕಜ್ ಕುಮಾರ್ ಶರ್ಮಾ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ
ನರೇಶ್ ಸಿಂಗ್(Naresh Singh) ಅವರು ಸ್ವತಃ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಇದಲ್ಲದೆ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಪಡ್ಡರ್ ಅವರ ನೇತೃತ್ವದ ಸ್ಥಳೀಯ ಅಧಿಕಾರಿಗಳ ತಂಡವು ಈಗಾಗಲೇ ಸ್ಥಳಕ್ಕೆ ತಲುಪಿದ್ದು, ಪರಿಸ್ಥಿತಿಯ ನಿಗಾ ವಹಿಸಿದೆ.
ಮೇಘಸ್ಫೋಟದ ಪರಿಣಾಮವಾಗಿ ಹಲವಾರು ಮನೆಗಳು ಹಾನಿಗೊಳಗಾಗಿದ್ದು, ಸ್ಥಳೀಯ ಜನರು ಭಯಭೀತರಾಗಿದ್ದಾರೆ. ಕೆಲವರು ಇನ್ನೂ ಅವಶೇಷಗಳ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು,
ಅವರನ್ನು ಹೊರತೆಗೆದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಪ್ರಾದೇಶಿಕ ಹವಾಮಾನ ಇಲಾಖೆಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಮೇಘಸ್ಫೋಟದ ಅಪಾಯ ಹೆಚ್ಚಾಗಿದೆ.