ರಾಜ್ಯ ವಿಧಾನಸಭೆ ಚುನಾವಣೆಗೆ(Vidhansabha Election) ಬಿಜೆಪಿ(BJP) ಭರ್ಜರಿ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ಮೊದಲ ಭಾಗವಾಗಿ ಕೆಲ ಜನಪ್ರಿಯ ಯೋಜನೆಗಳ ಮೂಲಕ ಮತದಾರರನ್ನು ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ.

ರಾಜ್ಯದ ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST) ಸಮುದಾಯಕ್ಕೆ 75 ಯುನಿಟ್ ಉಚಿತ ವಿದ್ಯುತ್ ನೀಡಲು ಸಿಎಂ ಬಸವರಾಜ್ ಬೊಮ್ಮಾಯಿ ನಿರ್ಧರಿಸಿದ್ದಾರೆ. ಈ ಕುರಿತು ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಆದೇಶ ಹೊರಬೀಳಲಿದೆ. ಇನ್ನು ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಉಚಿತ ವಿದ್ಯುತ್ ಮತ್ತು ನೀರು ನೀಡುವ ಕುರಿತು ಮಾತನಾಡಿದ್ದರು. ಹೀಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಹುದಿನಗಳಿಂದ ಕೇಳಿ ಬರುತ್ತಿದ್ದ ಉಚಿತ ವಿದ್ಯುತ್ ನೀಡುವ ಕಾರ್ಯಕ್ರಮವನ್ನು ಜಾರಿಗೆ ತರಲು ಮುಂದಾಗಿದ್ದಾರೆ.
ಈ ಯೋಜನೆ ಜಾರಿಗೊಳಿಸಿದರೆ ಗ್ರಾಮೀಣ ಭಾಗದ ದಲಿತರ ವೋಟುಗಳನ್ನು ಪಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಇನ್ನು ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ಚುನಾವಣಾ ವರ್ಷವೇ ಘೋಷಣೆಯಾಗುವ ಸಾಧ್ಯತೆ ಇದೆ. ಎಲ್ಲ ಸಮುದಾಯಗಳಿಗೂ ಜನಪ್ರಿಯ ಯೋಜನೆಗಳನ್ನು ನೀಡಲು ಬಿಜೆಪಿ ಪ್ಲ್ಯಾನ್ ರೂಪಿಸಿದೆ. ಮುಂಬರುವ ಬಜೆಟ್‍ನಲ್ಲಿ ಈ ಎಲ್ಲ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿ ಹೆಚ್ಚಿಸಲು ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್ ಹೆಚ್ಚಿಸುವ ಮೂಲಕ 13 ಲಕ್ಷ ಹೆಕ್ಟರ್ ಪ್ರದೇಶವನ್ನು ನೀರಾವರಿ ವ್ಯಾಪ್ತಿಗೆ ತರಲು ಮುಂದಿನ ಬಜೆಟ್‍ನಲ್ಲಿ ಸರ್ಕಾರ ದೊಡ್ಡ ಮೊತ್ತವನ್ನು ಮೀಸಲಿಡಲಿದೆ. ಇನ್ನು ಬಾಗಲಕೋಟೆ ಭಾಗದ ಸಸಾಲಟ್ಟಿ ಶಿವಲಿಂಗೇಶ್ವರ ಮತ್ತು ಮಂಟೂರ ಮಹಾಲಕ್ಷ್ಮಿ ನೀರಾವರಿ ಯೋಜನೆಗಳನ್ನು ಶೀಘ್ರವೇ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ.