ಬೆಂಗಳೂರು ಜು26: ರಾಜ್ಯದ ಹಲವೆಡೆ ಉಂಟಾಗಿರುವ ಪ್ರವಾಹ ಪರಿಸ್ಥಿತಿ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಹರಿಹಾಯ್ದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕರು ಮುಖ್ಯಮಂತ್ರಿ ಬದಲಾವಣೆ ಹಾಗೂ ಮಂತ್ರಿ ಪದವಿ ಉಳಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರವಾಹದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ, ಈವರೆಗೆ 9 ಮಂದಿ ಮೃತಪಟ್ಟಿದ್ದು, ಅನೇಕ ಜಾನುವಾರುಗಳು ಕೂಡ ಸಾವಿಗೀಡಾಗಿವೆ. ಆದರೆ ಜನರ ಕಷ್ಟ ಅರಿತು ಅವರ ನೆರವಿಗೆ ಧಾವಿಸಬೇಕಿದ್ದ ಬಿಜೆಪಿ ನಾಯಕರು ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಪದವಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ.
ಬಿಜೆಪಿ ಪಕ್ಷವೇ ಭ್ರಷ್ಟರ ಪಕ್ಷವಾಗಿರುವುದರಿಂದ ಶಶಿಕಲಾ ಜೊಲ್ಲೆಯವರು ಲಂಚ ಪಡೆದದ್ದನ್ನು ಬಿಜೆಪಿ ನಾಯಕರು ಸಾಧನೆಯಾಗಿ ಪರಿಗಣಿಸಿದಂತಿದೆ. ಇಲ್ಲದಿದ್ದರೆ ದಾಖಲೆ ಸಾಮೇತ ಸಿಕ್ಕಿಬಿದ್ದಿರುವ ಭ್ರಷ್ಟ ಮಂತ್ರಿಯನ್ನು ಇನ್ನೂ ಸಚಿವ ಸಂಪುಟದಲ್ಲಿ ಇಟ್ಟುಕೊಂಡು ಸುಮ್ಮನೆ ಕೂರುತ್ತಿದ್ದರೆ? ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಭ್ರಷ್ಟ ಮುಖ್ಯಮಂತ್ರಿಯ ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿ ಮಾಡಿದರೆ ಸಾಮಾನ್ಯ ಜನರಿಗೇನು ಲಾಭ? ಅದರ ಬದಲು ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ಅಧಿಕಾರ ಬಿಟ್ಟು ತೊಲಗಿದರೆ ಜನ ನೆಮ್ಮದಿಯ ಬದುಕು ನಡೆಸುವಂತಾಗುತ್ತದೆ ಎಂದಿರುವ ಅವರು, ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾಧೆ ಮಾತಿನಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಯಡಿಯೂರಪ್ಪ ಅವರೇ ಉತ್ತಮ ಮುಖ್ಯಮಂತ್ರಿಯಾಗಿ ಕಂಡಿದ್ದಾರೆ. ಸ್ವತಃ ಬಿಜೆಪಿ ಶಾಸಕರೇ ಯಡಿಯೂರಪ್ಪ ಅವರ ಕುಟುಂಬ ಸರ್ಕಾರದ ಖಜಾನೆಯನ್ನು ಲೂಟಿ ಮಾಡುತ್ತಿದೆ ಅಂದಿದ್ದಾರೆ, ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದ್ದಾರೆ.