Bengaluru : ರಾಜ್ಯದ ರಾಜಧಾನಿ ಬೆಂಗಳೂರು(Bengaluru) ಸುತ್ತಮುತ್ತ ಮತ್ತು ರಾಜ್ಯದ ವಿವಿದೆಡೆ ನಡೆಯುತ್ತಿರುವ ಚಿರತೆ ದಾಳಿಯನ್ನು(Leopard Attack) ತಡೆಯಲು ಎಲ್ಲಾ ಪ್ರಯತ್ನಗಳನ್ನು ಅರಣ್ಯ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ರಾಜ್ಯದ ವಿವಿದೆಡೆ ಸುದ್ದಿಯಾಗುತ್ತಿರುವ ಚಿರತೆ ದಾಳಿಗಳ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ(Basavaraj Bommai), ಚಿರತೆ ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ ನೀಡಲಾಗುವುದು. ಆನೆ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ನೀಡುತ್ತಿರುವಂತೆ, ಚಿರತೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೂ ಪರಿಹಾರ ನೀಡಲಾಗುವುದು.
ಬೆಂಗಳೂರು ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಅರಣ್ಯ ಇಲಾಖೆ(Forest Department) ಗಂಭೀರವಾಗಿ ಪರಿಗಣಿಸಿದೆ. ಕಳೆದ ಹಲವು ದಿನಗಳಿಂದ ಚಿರತೆಗಳನ್ನು ಸೆರೆ ಹಿಡಿಯಲು ಪ್ರಯತ್ನ ನಡೆಸಲಾಗುತ್ತಿದ್ದು, ಬಲೆಯೂ ಬೀಸಲಾಗಿದೆ. ಚಿರತೆಗಳನ್ನು ಜೀವಂತವಾಗಿ ಹಿಡಿದು ಕಾಡಿಗೆ ಬಿಡುವಂತೆ ಇಲಾಖೆಗೆ ಸೂಚಿಸಿರುವುದಾಗಿ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ : https://vijayatimes.com/rumors-behind-rashmika-ban/
ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅವುಗಳನ್ನು ನಿಯಂತ್ರಿಸಲು ಹಾಗೂ ಅರಣ್ಯದಿಂದ ದಾರಿ ತಪ್ಪಿದ ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆಯ ಪರಿಣಿತರ ವಿಶೇಷ ತಂಡ ಕಾರ್ಯಾಚರಣೆ ನಡೆಸಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇನ್ನು ಮೈಸೂರು ಜಿಲ್ಲೆಯ ಟಿ ನರಸೀಪುರ(T Narasipura) ತಾಲೂಕಿನ ಕೆಬೆಹುಂಡಿ ಗ್ರಾಮದಲ್ಲಿ ಗುರುವಾರ ಚಿರತೆ ದಾಳಿಗೆ ವಿದ್ಯಾರ್ಥಿಯೊರ್ವಳು ಮೃತಪಟ್ಟಿದ್ದಾಳೆ. ಸಂತ್ರಸ್ತೆಯನ್ನು ಟಿ ನರಸೀಪುರದ ಸರ್ಕಾರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ ಮೇಘನಾ ಎಂದು ಗುರುತಿಸಲಾಗಿದೆ.
ಮೈಸೂರು ಗಡಿ ಸಮೀಪದ ಚಾಮರಾಜನಗರದಲ್ಲಿ(Chamarajnagar) ಮತ್ತೊಂದು ಸಾವು ವರದಿಯಾಗಿದೆ. ಬೆಂಗಳೂರಿನ ಕೆಂಗೇರಿ, ಕುಂಬಳಗೋಡು, ದೇವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಎರಡೂ ನಗರಗಳಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಜನರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
- ಮಹೇಶ್.ಪಿ.ಎಚ್