ಕರ್ನಾಟಕ(Karnataka) ರಾಜ್ಯದಲ್ಲಿ ಶಿವನ ಮೂರನೇ ಕಣ್ಣಿನಂತೆ ಜೆಡಿಎಸ್(JDS) ಪಕ್ಷ 123 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಬಹುಮತ ಪಡೆಯುತ್ತೇವೆ, ತುಮಕೂರು(Tumkuru) ಜಿಲ್ಲೆಯ ಎಲ್ಲ 11 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(CM Ibrahim) ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ನಡೆದ ‘ಜನತಾ ಜಲಧಾರೆ’ ಸಮಾವೇಶದಲ್ಲಿ ಮಾತನಾಡಿದ ಅವರು, ಎಚ್.ಡಿ ದೇವೇಗೌಡರನ್ನು ತುಮಕೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿ ಸೋಲಿಸಿದ್ದು ಮತ್ತು ಎಚ್.ಡಿ ಕುಮಾರಸ್ವಾಮಿಯವರ ಸರ್ಕಾರವನ್ನು ಬೀಳುವಂತೆ ಮಾಡಿ, ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ್ದು ಜಿ. ಪರಮೇಶ್ವರ್ ಎಂದು ಆರೋಪಿಸಿದರು. ಇನ್ನು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ವಿಪಕ್ಷ ಬಿಜೆಪಿಗಿಂತ ಮೈತ್ರಿ ಪಕ್ಷವಾಗಿದ್ದ ಕಾಂಗ್ರೆಸ್ನವರು ಹೆಚ್ಚಿಗೆ ಕಾಟ ಕೊಟ್ಟರು.
ಕುಮಾರಸ್ವಾಮಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ಯಾರು? ನೀವು ಕುತಂತ್ರ ನಡೆಸಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದು ಈಗ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ-ಟೀಮ್ ಅಂತೀರಾ ಎಂದು ಕಾಂಗ್ರೆಸ್ನ್ನು ಪ್ರಶ್ನಿಸಿದರು. ನಾವು ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿಲ್ಲ ಎಂದು ಜಿ. ಪರಮೇಶ್ವರ್ ಹೇಳುತ್ತಾರೆ. ಹಾಗಾದ್ರೆ ಅವರು ಸಿದ್ದಗಂಗಾ ಶ್ರೀಗಳ ಗದ್ದುಗೆ ಮೇಲೆ ಪ್ರಮಾಣ ಮಾಡಿ, ಕಾಂಗ್ರೆಸ್ ಪಕ್ಷದಿಂದ ಯಾವುದೇ ತೊಂದರೆಯನ್ನು ಕುಮಾರಸ್ವಾಮಿಯವರಿಗೆ ಕೊಡಲಿಲ್ಲ. ಅವರ ಸರ್ಕಾರ ಬೀಳಿಸಲು ಕುತಂತ್ರ ನಡೆಸಲಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಇನ್ನು ಜೆಡಿಎಸ್ ಪಕ್ಷ ರಾಜ್ಯದ ಪ್ರಬಲ ಪ್ರಾದೇಶಿಕ ಶಕ್ತಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಶಕ್ತಿಯನ್ನು ತೋರಿಸುತ್ತೇವೆ. 123 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಜನತಾದಳ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.