ಸಿದ್ದರಾಮಯ್ಯನವರ(Siddaramaiah) ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮುಸ್ಲಿಂ(Muslim) ನಾಯಕ(Leader) ಸಿಎಂ ಇಬ್ರಾಹಿಂ(CM Ibrahim) ಕಾಂಗ್ರೆಸ್(Congress) ತೊರೆದು ಜೆಡಿಎಸ್(JDS) ಸೇರಿದ ನಂತರ, ಇದೀಗ ಕಾಂಗ್ರೆಸ್‍ನಲ್ಲಿರುವ ಅನೇಕ ಅಸಮಾಧಾನಿತ ಮುಸ್ಲಿಂ ನಾಯಕರನ್ನು ಜೆಡಿಎಸ್‍ಗೆ ಸೇರಿಸಲು ತೆರೆಮರೆಯಲ್ಲಿ ಭಾರೀ ಪ್ರಯತ್ನಗಳನ್ನು ನಡೆಸಿದ್ದಾರೆ.

ಅನೇಕ ಮುಸ್ಲಿಂ ನಾಯಕರನ್ನು ಭೇಟಿಯಾಗಿ ಜೆಡಿಎಸ್‍ಗೆ ಸೇರುವಂತೆ ಸಿಎಂ ಇಬ್ರಾಹಿಂ ಮನವೊಲಿಸುವ ಪ್ರಯತ್ನ ನಡೆಸಿದ್ದು, ಇದರ ಭಾಗವಾಗಿ ಮೈಸೂರಿನ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿದ್ದರು. ಸದ್ಯ ಮೈಸೂರ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮತ್ತು ತನ್ವೀರ್ ಸೇಠ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದನ್ನೇ ಬಳಸಿಕೊಂಡು ತನ್ವೀರ್ ಸೇಠ್‍ಗೆ ಸಿಎಂ ಇಬ್ರಾಹಿಂ ಗಾಳ ಹಾಕಿದ್ದಾರೆ. ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತ ನಾಯಕರಿಗೆ ಪ್ರಾಶಸ್ತ್ಯ ಕಡಿಮೆಯಾಗುತ್ತಿದೆ. ರಾಜ್ಯ ಕಾಂಗ್ರೆಸ್‍ನಲ್ಲಿ ಈ ಹಿಂದೆ ನಮ್ಮ ಸಮುದಾಯಕ್ಕೆ ನೀಡುತ್ತಿದ್ದ ಪ್ರಾತಿನಿಧ್ಯ ಈಗ ಸಿಗುತ್ತಿಲ್ಲ.
ಹೀಗಾಗಿ ನಾವೆಲ್ಲರೂ ಒಟ್ಟಾಗಿ ಜೆಡಿಎಸ್ ಸೇರಿದರೆ ಸಮುದಾಯವನ್ನು ಗಟ್ಟಿಗೊಳಿಸಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶವನ್ನು ಗಮನಿಸಿದರೆ ದೇಶದಲ್ಲಿ ಕಾಂಗ್ರೆಸ್ ಕತೆ ಮುಗಿದಿದೆ. ಹೀಗಾಗಿ ಕಾಂಗ್ರೆಸ್‍ನ ನಂಬಿಕೊಂಡರೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಮುಂಬರುವ ರಾಜ್ಯ ವಿಧಾನಸಭೆಯಲ್ಲಿ ಯಾವ ಪಕ್ಷ ಬಹುಮತ ಪಡೆಯುವುದಿಲ್ಲ. ಆಗ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಜೆಡಿಎಸ್ ಪಕ್ಷ ಅನಿವಾರ್ಯವಾಗುತ್ತದೆ. ಹೀಗಾಗಿ ನಾವು ಜೆಡಿಎಸ್‍ನಲ್ಲಿದ್ದರೆ ಅಧಿಕಾರ ಹಿಡಿಯಬಹುದು.
ಇನ್ನು ಜೆಡಿಎಸ್ ಅಧಿಕಾರಕ್ಕೆ ಬಂದರೆ ನಮ್ಮ ಸಮುದಾಯದವರನ್ನು ಮಂತ್ರಿ ಮಾಡಿಸುವ ಹೊಣೆಗಾರಿಕೆ ನನ್ನದು ಎಂದು ಮುಸ್ಲಿಂ ನಾಯಕರ ಬಳಿ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಇನ್ನು ಇತ್ತೀಚೆಗೆ ಭೇಟಿಯಾಗಿದ್ದ ಜಮೀರ್ ಅಹ್ಮದ್‍ನನ್ನು ಕೂಡಾ ಸಿಎಂ ಇಬ್ರಾಹಿಂ ಜೆಡಿಎಸ್‍ಗೆ ಆಹ್ವಾನಿಸಿದ್ದರು. ಕಾಂಗ್ರೆಸ್‍ನಲ್ಲಿ ರಾಜಕೀಯ ಭವಿಷ್ಯವಿಲ್ಲ, ಈಗಲೇ ಮರಳಿ ಜೆಡಿಎಸ್ ಸೇರು. ಅದಕ್ಕೆ ಬೇಕಾದ ವ್ಯವಸ್ಥೆ ನಾನು ಮಾಡುತ್ತೇನೆ ಎಂದು ಹೇಳಿದ್ದಾರಂತೆ.

ಇನ್ನು ಸಿಎಂ ಇಬ್ರಾಹಿಂ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಜಮೀರ್ ಅಲ್ಲಿಂದ ಜಾಗ ಖಾಲಿ ಮಾಡಿದರಂತೆ. ಇನ್ನು ಉತ್ತರಕರ್ನಾಟಕದ ವಿಜಯಪುರ, ಕಲಬುರಗಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಅನೇಕ ಮುಸ್ಲಿಂ ನಾಯಕರ ಜೊತೆ ಸಿಎಂ ಇಬ್ರಾಹಿಂ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.