Karwar: ಶಿರೂರಿನ (Shiruru) ಭೂ ಕುಸಿತವು ಪ್ರಕೃತಿ ವಿಕೋಪವಲ್ಲ, ಐ.ಆರ್.ಬಿ (IRB) ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಿದೆ. ಯಾರೇ ತಪ್ಪು ಮಾಡಿದರೂ ಕೂಡ ಅವರ ಮೇಲೆ ಕ್ರಮ ವಹಿಸಲಾಗುವುದು, ರಸ್ತೆ ನಿರ್ಮಾಣ ಮಾಡಿರುವವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು. ಪರಿಹಾರ ಕಾಮಗಾರಿ ಮುಗಿದ ಮೇಲೆ ಪ್ರಕರಣದ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ರಸ್ತೆ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹ ಮಾಡುತ್ತಿದ್ದು ಕೇಂದ್ರ ರಸ್ತೆ ಸಾರಿಗೆ ಸಚಿವರೊಂದಿಗೆ ಮಾತನಾಡುತ್ತೇನೆ. ಕಳಪೆ ಕೆಲಸವಾಗಿದ್ದರೆ ಅದನ್ನು ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಶಿರೂರಿನ ಭೂ ಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿರೂರು ಭೂಕುಸಿತದ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಎಸ್.ಡಿ.ಆರ್. ಎಫ್ (SDRF) ನಿಂದ 46 ಜನ, ಎನ್.ಡಿ.ಆರ್.ಎಫ್ ನಿಂದ 24 ಜನ ಹಾಗೂ 44 ಜನ ಮಿಲಿಟರಿಯವರು ಹಾಗೂ ನೌಕಾಪಡೆಯವರೂ ಕೂಡ ಕೈಜೋಡಿಸಿದ್ದಾರೆ. ಗೋವಾ ಮತ್ತು ಅಂಕೋಲಾ (Goa and Ankola) ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜುಲೈ 16 ರಂದು ಭೂ ಕುಸಿತವಾಗಿದೆ. ಭೂ ಕುಸಿತದಿಂದ 10 ಜನ ಕಾಣೆಯಾಗಿದ್ದಾರೆ. ಅದರಲ್ಲಿ ಏಳು ಜನರ ಹೆಣಗಳು ಪತ್ತೆಯಾಗಿದ್ದು ಇನ್ನೂ ಮೂವರು ಕಾಣೆಯಾಗಿದ್ದು ಅವರ ಪತ್ತೆಗಾಗಿ ಪರಿಹಾರ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಖಾಲಿ ಗ್ಯಾಸ್ ಟ್ಯಾಂಕರ್ (Gas Tanker) ಹಾಗೂ ಭರ್ತಿಯಾಗಿರುವ ಗ್ಯಾಸ್ ಟ್ಯಾಂಕರ್ ಕೂಡ ಹಾನಿಗೀಡಾಗಿವೆ. ಅಲ್ಲಿಯೇ ವಾಸವಾಗಿರುವ ಒಂದೇ ಕುಟುಂಬದವರು ಟೀ ಅಂಗಡಿಯನ್ನು ಇಟ್ಟುಕೊಂಡಿದ್ದರು. ಅವರಲ್ಲಿ ಐವರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ರಿಸ್ಕ್ ಆಪರೇಶನನ್ನು ತ್ವರಿತವಾಗಿ ಮಾಡಬೇಕೆಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ. ಸಾವನ್ನಪ್ಪಿದವರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಬೇಕೆಂದು ಘೋಷಿಸಲಾಗಿದೆ.

ಈಗಾಗಲೇ ಅದನ್ನು ವಿತರಿಸಲಾಗಿದೆ. ಒಂದು ವೇಳೆ ಭೂ ಕುಸಿತದಲ್ಲಿ ಇನ್ಯಾರಾದರೂ ಸಾವನ್ನಪ್ಪಿದ್ದರೆ ಅವರಿಗೂ 5 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು. ನೌಕಾದಳ ಹಾಗೂ ರಕ್ಷಣಾ ತಂಡದವರಿಗೆ ಎಲ್ಲೆಡೆ ಹುಡುಕುವಂತೆ ಸೂಚನೆ ನೀಡಲಾಗಿದೆ. 10 ಜನರು ಕಾಣೆಯಾಗಿದ್ದಾರೆ. ಘಟನೆ ನಡೆದ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನು ಹಾಗೂ ಶಾಸಕರನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ರಾಜ್ಯ ಸರ್ಕಾರ ಕಾರ್ಯಾಚರಣೆಯನ್ನು ವಿಳಂಬ ಮಾಡುತ್ತಿಲ್ಲ. ಎಲ್ಲವನ್ನೂ ತ್ವರಿತವಾಗಿ ಮಾಡುತ್ತಿದ್ದೇವೆ. ಕೇರಳದ ಅರ್ಜುನ್ (Arjun) ಎಂಬುವರು ಕಾಣೆಯಾಗಿದ್ದು, ತಮ್ಮ ರಾಜ್ಯದವರೆಂದು ಅವರೆಲ್ಲಾ ಬಂದಿರಬಹುದು. ಆದರೆ ನಾವು ವಿಳಂಬ ಮಾಡದೇ, ನಿರ್ಲಕ್ಷ್ಯ ತೋರದೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಕಳೆದ ಬಾರಿ ಬರವಿದ್ದು, ಈ ಬಾರಿ ಮಳೆಯಾಗುತ್ತಿದೆ. ಬಹಳ ವರ್ಷಗಳಿಂದ ಇಲ್ಲಿ ಭೂ ಕುಸಿತವಾಗಿರಲಿಲ್ಲ. ಎಲ್ಲೆಲ್ಲಿ ಭೂ ಕುಸಿತವಾಗುತ್ತದೆಯೋ ಅದನ್ನು ತಡೆಗಟ್ಟಲು ಪ್ರಯತ್ನಿಸಲಾಗುವುದು. ರಾತ್ರಿ ವೇಳೆ ಕಾರ್ಯಾಚರಣೆ ನಡೆಯುವುದಿಲ್ಲ.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕಾರಣ ಮಾಡುವುದಿಲ್ಲ. ಕೇಂದ್ರ ಸರ್ಕಾರದ ತಂಡ ಎನ್.ಡಿ.ಆರ್. ಎಫ್ (NDRF) ಕೂಡ ಇಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ನೌಕಾ ತಂಡವೂ ಇದೆ. ಇಲ್ಲಿ ಇನ್ಯಾರ ಮೇಲೆಯೂ ದೋಷ ಹೊರೆಸಲು ನಾನು ಹೋಗುವುದಿಲ್ಲ. ಭೂ ಕುಸಿತದಿಂದ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ನಾವು ಕೊಡುವ ಪರಿಹಾರದಿಂದ ಅವರ ಜೀವ ಮರಳಿ ಬರುವುದಿಲ್ಲ. ಪ್ರಕೃತಿ ವಿಕೋಪದಿಂದಾಗಿರುವ ಘಟನೆ ಇದು. ಸಾಧ್ಯವಾದಷ್ಟು ಅವರನ್ನು ಉಳಿಸುವ ಪ್ರಯತ್ನ ಮಾಡಲಾಗುವುದು. ಇಲ್ಲದಿದ್ದರೆ ಅವರ ಮೃತ ದೇಹವನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುವುದು. ಉಳುವರೆ ಎಂಬ ಗ್ರಾಮದಲ್ಲಿ ಮಳೆಯಿಂದಾಗಿ ಏಳು ಮನೆಗಳು ಹಾನಿಯಾಗಿವೆ. ಕೂಡಲೇ ಪರಿಹಾರ ನೀಡಲಾಗುವುದು ಹಾಗೂ ಪರ್ಯಾಯ ಸ್ಥಳವನ್ನೂ ನೀಡಲಾಗುವುದು ಎಂದು ಹೇಳಿದ್ದಾರೆ.