ಯೋಗಿ ಆದಿತ್ಯನಾಥ್(Yogi Adityanath) ಎರಡನೇಯ ಅವಧಿಗೆ ಮುಖ್ಯಮಂತ್ರಿಯಾಗಿ(ChiefMinister) ಅಧಿಕಾರ ವಹಿಸಿಕೊಂಡ ನಂತರ ಆಡಳಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಅನುಸರಿಸುತ್ತಿರುವ ವಿಳಂಬ ನೀತಿಯಿಂದ ತೀವ್ರ ಬೇಸರಗೊಂಡಿರುವ ಯೋಗಿ ಆದಿತ್ಯನಾಥ್ ಕೆಲ ಹೊಸ ರೂಲ್ಸ್ ಗಳನ್ನು ರೂಪಿಸಿದ್ದಾರೆ. ಸಚಿವರು ಮತ್ತು ರಾಜ್ಯದ ಎಲ್ಲ ಸರ್ಕಾರಿ ಅಧಿಕಾರಿಗಳು ಈ ರೂಲ್ಸ್ ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರು ರಾಜ್ಯದ ಜಿಲ್ಲೆಗಳ ಪ್ರವಾಸಕ್ಕೆ ತೆರಳಿದಾಗ ಖಾಸಗಿ ಹೋಟೆಲ್ಗಳಲ್ಲಿ ಉಳಿದುಕೊಳ್ಳುವಂತಿಲ್ಲ. ಸರ್ಕಾರಿ ಗೆಸ್ಟ್ ಹೌಸ್ಗಳನ್ನೇ ಬಳಸಬೇಕು, ಅಲ್ಲಿಯೇ ಊಟ ಮಾಡಬೇಕು. ಖಾಸಗಿ ಗೆಸ್ಟ್ ಹೌಸ್ಗಳಲ್ಲಿ ಉಳಿದುಕೊಂಡರೆ ಅದರ ಖರ್ಚನ್ನು ನೀವೇ ಪಾವತಿಸಬೇಕೆಂದು ಯೋಗಿ ತಮ್ಮ ಸಂಪುಟದ ಎಲ್ಲ ಸಚಿವರಿಗೂ ಸೂಚಿಸಿದ್ದಾರೆ. ಇನ್ನು ಸರ್ಕಾರಿ ನೌಕರರು ಊಟದ ವಿರಾಮವನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ.
ಹೀಗಾಗಿ ಮಧ್ಯಾಹ್ನದ ನಂತರ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಾಗುತ್ತಿಲ್ಲ ಎಂದು ವ್ಯಾಪಕ ದೂರುಗಳು ಬಂದಿದ್ದು, ಇನ್ನು ಮುಂದೆ ಎಲ್ಲ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಮಧ್ಯಾಹ್ನ 1:30 ರಿಂದ 2:00 ಗಂಟೆಯವರೆಗೆ ಮಾತ್ರ ಊಟದ ವಿರಾಮವನ್ನು ಪಡೆಯಬೇಕೆಂದು ಸೂಚಿಸಿದ್ದು, ತಡವಾಗಿ ಕಚೇರಿಗೆ ಬರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ದಿಢೀರ್ ಆಗಿ ಕಚೇರಿ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ಸರ್ಕಾರಿ ಕಚೇರಿಗಳಲ್ಲಿ ಕಡತ ವಿಲೇವಾರಿಯಲ್ಲಿಯೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಹೀಗಾಗಿ ಯಾವುದೇ ಕಡತವನ್ನಾದರೂ ಮೂರು ದಿನಗಳೊಳಗಾಗಿ ಪರಿಶೀಲನೆ ನಡೆಸಬೇಕು. ಮೂರು ದಿನಗಳಿಗಿಂತ ಹೆಚ್ಚು ದಿನ ಒಂದು ಕಡತವನ್ನು ಇಟ್ಟುಕೊಂಡು ಕೂಡುವಂತಿಲ್ಲ. ಪ್ರತಿದಿನ ಬರುವ ಕಡತಗಳನ್ನು ಆ ದಿನವೇ ಪರಿಶೀಲನೆ ನಡೆಸಬೇಕು ಎಂದು ಯೋಗಿ ಸೂಚನೆ ನೀಡಿದ್ದಾರೆ.