ನವದೆಹಲಿ, ಜೂ. 11: ಕೋವಿಡ್ ಲಸಿಕೆ ಅಭಿಯಾನಕ್ಕಾಗಿ ಪ್ರಾರಂಭಿಸಿರುವ ಕೋ-ವಿನ್ ವೆಬ್ಸೈಟ್ ಹ್ಯಾಕ್ ಆಗಿದೆ ಎಂಬುದು ಸುಳ್ಳು ವದಂತಿಯಾಗಿದ್ದು, ಯಾವುದೇ ಡೇಟಾ ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಕೇಂದ್ರ, ಈ ವರದಿಗಳೆಲ್ಲ ನಕಲಿ, ಸುರಕ್ಷಿತ ಡಿಜಿಟಲ್ ವ್ಯವಸ್ಥೆಯಲ್ಲಿ ಪೋರ್ಟಲ್ ಎಲ್ಲ ವ್ಯಾಕ್ಸಿನೇಷನ್ ಡೇಟಾವನ್ನು ಸಂಗ್ರಹಿಸಿಡುತ್ತದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೋವಿಡ್-19 ನಿಯಂತ್ರಣ ಕುರಿತ ದತ್ತಾಂಶ ನಿರ್ವಹಣೆ ಮತ್ತು ತಂತ್ರಜ್ಞಾನದ ಉನ್ನತ ಸಮಿತಿ ಅಧ್ಯಕ್ಷ ಡಾ. ಆರ್.ಎಸ್. ಶರ್ಮಾ, ‘ಕೋ-ವಿನ್ ವ್ಯವಸ್ಥೆ ಹ್ಯಾಕ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ಸುದ್ದಿ ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೋ-ವಿನ್, ಎಲ್ಲ ವ್ಯಾಕ್ಸಿನೇಷನ್ ಡೇಟಾವನ್ನು ಸುರಕ್ಷಿತ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಗ್ರಹಿಸಿಡುತ್ತದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಕೋ-ವಿನ್ ಡೇಟಾ ಹೊರಗಡೆ ಹಂಚಿಕೊಂಡಿಲ್ಲ. ಫಲಾನುವಿಗಳ ಸ್ಥಳ ಮಾಹಿತಿ ಸೋರಿಕೆಯಾಗಿದೆ ಎಂಬ ವರದಿಗೆ ಸಂಬಂಧಿಸಿದಂತೆ ಅಂತಹ ಯಾವುದೇ ಮಾಹಿತಿಯನ್ನು ಕೋ-ವಿನ್ ಪೋರ್ಟಲ್ನಲ್ಲಿ ಸಂಗ್ರಹಿಸಲಾಗುತ್ತಿಲ್ಲ’ ಎಂದಿದ್ದಾರೆ.