ಮೈಸೂರು, ಜ. 09: ಬಿಜೆಪಿಯದ್ದು ಕಮಿಷನ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಎಸ್.ಟಿ. ಸೋಮಶೇಖರ್, ಯಾವುದು ಕಮಿಷನ್ ಸರ್ಕಾರ ಎಂಬುದು ನನಗೂ ಗೊತ್ತಿದೆ. ನಾನು ಸಹ ಹಿಂದಿನ ಸರ್ಕಾರದಲ್ಲಿದ್ದೆ. ಅಲ್ಲಿ ಯಾವ ರೀತಿ ನಡೆಯುತ್ತಿತ್ತು ಎಂಬುದು ನನಗೂ ಗೊತ್ತಿದೆ. ಇವರು ಇಂಥ ಹೇಳಿಕೆಯನ್ನು ಇಲ್ಲಿಗೇ ನಿಲ್ಲಿಸಲಿ. ಇಲ್ಲವಾದರೆ ನಾನು ಎಲ್ಲವನ್ನೂ ಹೇಳಬೇಕಾಗುತ್ತದೆ ಎಂದು ಹೇಳಿದರು.
ನಿದ್ರಾವಸ್ಥೆಯಲ್ಲಿರುವ ಕಾಂಗ್ರೆಸ್
ಇಷ್ಟು ದಿನ ನಿದ್ರಾವಸ್ಥೆಯಲ್ಲಿದ್ದ ಕಾಂಗ್ರೆಸ್ ಪಕ್ಷ ಈಗ ಎದ್ದಿದೆ. ಸರ್ಕಾರದ ಬಗ್ಗೆ ಹಾಗೂ ಹೋರಾಟಗಳ ಬಗ್ಗೆ ಮಾತನಾಡುತ್ತಿದೆ. ಲಾಕ್ ಡೌನ್ ವೇಳೆ ಸಹಜವಾಗಿ ಆರ್ಥಿಕ ಚಟುವಟಿಕೆ ಕುಂಟಿತವಾಗಿರಬಹುದು. ಆದರೆ, ಈಗ ಪುನಃ ವೇಗವನ್ನು ಪಡೆದುಕೊಂಡಿದೆ. ಎಲ್ಲ ಅಭಿವೃದ್ಧಿ ಕಾರ್ಯಗಳು ಕ್ಷಿಪ್ರ ಗತಿಯಲ್ಲಿ ಸಾಗುತ್ತಿದೆ ಎಂದು ಸಚಿವರಾದ ಸೋಮಶೇಖರ್ ಅವರು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ನಿಷ್ಕ್ರಿಯ ಸಹಕಾರ ಸಂಘಗಳತ್ತ ಗಮನ
ಸುಮಾರು ಸಾವಿರದಷ್ಟು ಸಹಕಾರ ಸಂಘಗಳು ಕರೋನಾ ಸಮಯದಲ್ಲಿ ನಿಷ್ಕ್ರಿಯವಾಗಿದ್ದರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಹಕಾರ ಸಂಘಗಳ ನಿಷ್ಕ್ರಿಯತೆಗೆ ಕರೋನಾ ಒಂದೇ ಕಾರಣವಲ್ಲ. ಕಳೆದೊಂದು ವರ್ಷದಿಂದ ಬೇರೆ ಬೇರೆ ಕಾರಣಗಳಿಗೆ ಅವುಗಳು ನಿಷ್ಕ್ರಿಯಗೊಂಡಿವೆ. ಈ ಬಗ್ಗೆ ಗಮನಹರಿಸಲಾಗುವುದು ಎಂದು ಸಹಕಾರ ಸಚಿವರು ತಿಳಿಸಿದರು.